ಯೋಗೇನ ಚಿತ್ತಸ್ಯ – ಮನದ ತಿಳಿ

ಯೋಗದಿಂದ ಚಿತ್ತಕ್ಕಂಟಿರುವ ಮಲವನ್ನು, ವ್ಯಾಕರಣದಿಂದ ಮಾತಿನಲ್ಲಿರುವ ಕೊಳಕನ್ನು, ಮತ್ತು ಆಯುರ್ವೇದದಿಂದ ಸ್ಥೂಲ ದೇಹಕ್ಕೆ ಮೆತ್ತಿರುವ ಅಮೇಧ್ಯವನ್ನು ತೊಲಗಿಸಲು ಸಾಧ್ಯವಾಗಿಸಿದ, ಸಾಧುಚಿತ್ತರಲ್ಲಿ ಶ್ರೇಷ್ಠತಮರಾದ ಪತಂಜಲಿ ಮುನಿಗಳನ್ನು ಹೃದಯದ ಭಕ್ತಿಯೊಂದಿಗೆ ಕೈಮುಗಿದು ನಮಸ್ಕರಿಸುತ್ತೇನೆ.

ಈ ಶ್ಲೋಕ ಸೂಚಿಸುವಂತೆ ಪತಂಜಲಿ ಮಹರ್ಷಿಗಳು ಮಾನವನ ತ್ರಿಕರಣಶುದ್ಧಿಗೆ ಮೂಲಮಂತ್ರದಂತೆ ಯೋಗ, ವ್ಯಾಕರಣ ಮತ್ತು ಆಯುರ್ವೇದದ ಸೂತ್ರಗಳನ್ನು ನಮಗೆ ಕೊಟ್ಟಿದ್ದು ಉದ್ಧಾರವಾಗಲೆಂಬ ಕರುಣೆಯಿಂದ. ಇವೇ ಅಲ್ಲವೇ ಮಾನವನೆಂಬ ಪ್ರಾಣಿಯ ಕೈಯಳತೆಗೆ ಸಿಗಬಹುದಾದ್ದು. ಸ್ವಪ್ರೇರಣೆಯಿಂದಲೊ, ಪರಹಟಕ್ಕೊ ಮೈ-ವಾಕ್‍-ಮನಗಳನ್ನು ಸರಿಪಡಿಸಿಕೊಳ್ಳುವ ಒತ್ತಾಸೆ ಮೂಡಿ ಸರಿಯಾದ ದಿಕ್ಕನ್ನು ಹುಡುಕುವ ಪ್ರವೃತ್ತಿಗೆ ಯೋಗಿ ಪತಂಜಲಿಗಳ ದಿಗ್ದರ್ಶನ ಅನಿವಾರ್ಯ ಮತ್ತು ಅತ್ಯಮೂಲ್ಯ. ಮಹರ್ಷಿಗಳು ಆರಿಸಿದ ಈ ಮೂರಿಗೆ ಒಂದು ಚಿಕ್ಕ ವಿವರಣೆ ಕೆಳಗಿನಂತೆ.

ಅಶೌಚ – ಮಲಗಳ ವಿವರಣೆ

ಸ್ಥೂಲ ದೇಹದ, ಮನಸ್ಸಿನ, ಮಾತಿನ ಕೊಳಕನ್ನು ತಳ್ಳಬೇಕಾದರೆ ಅದು ಅಲ್ಲಿರಬೇಕಲ್ಲವೆ? ಅದರರ್ಥ ಕೊಳಕು ಇದೆ, ಅದು ಒಟ್ಟುಗೊಳ್ಳುತ್ತದೆ, ಸಂಗ್ರಹವಾಗುತ್ತದೆ, ಅದರಿಂದ ದೂರಾಗಬೇಕು, ಅಮೇಧ್ಯವನ್ನು ನಿವಾರಿಸಿದ ಸ್ಫಟಿಕತುಲ್ಯವಾದ ಮೇಧ್ಯಾವಸ್ಥೆ ಇದೆ, ಅದಕ್ಕಾಗಿ ದಾರಿಯೊಂದು ಹೊಳೆಯುತ್ತಿದೆ – ಎಂಬ ಅರಿವಿನ ಸರಣಿ ನಮ್ಮ ಬುದ್ಧಿಗೆ ತಲುಪಲು ಸ್ವಲ್ಪವಾದರೂ ಒಳಗಿನ ಒತ್ತಾಸೆ, ಅದರೊಂದಿಗಿನ ಭಗವಂತನ ಕೃಪೆ ಅಗತ್ಯ. ಈಗ ಪ್ರಶ್ನೆ ಇರುವುದು ಮೈ-ವಾಕ್‍-ಮನಸ್ಸು; ಈ ಮೂರರಲ್ಲಿ ಹುಟ್ಟಿ, ಮನೆಮಾಡಿ, ಬೆಳೆದು, ಬಲಿತು, ಹಣ್ಣಾಗಿ, ಕಳೆತು, ಕೊಳೆಯುವ ಕೊಳಕಿನ ಸ್ವರೂಪವನ್ನರಿಯುವುದರ ಕುರಿತು. ಈ ಮಲಗಳ ವಿವಿಧ ರೀತಿ-ನೀತಿ, ಆಳ-ಅಗಲ, ಎತ್ತರ-ತಗ್ಗು, ಬಿಂಕು-ಬಿನ್ನಾಣದ ಬಗ್ಗೆ ಕೊಂಚ ಮನನ ಮಾಡುವುದು ಒಳಿತು ನನಗಾಗಿ, ನಮ್ಮೆಲ್ಲರಿಗಾಗಿ, ಜಗತ್ತಿನ ಶಾಂತಿಗಾಗಿ. ಇಲ್ಲಿ ವಿಶ್ಲೇಷಿಸುವ ಬಹುಪಾಲು ವಿಷಯಗಳಿಗೆ ಶಾಸ್ತ್ರದ ಹಿನ್ನೆಲೆ ಅಡಿಪಾಯ.

ದೇಹದ – ಮಲ

ಈ ನೆಲದ್ದೇ ಆದ ಆಯಸ್ಸಿನ ವೈದ್ಯ-ವಿಜ್ಞಾನದಲ್ಲಿ (ಆಯುರ್ವೇದ) ನಮ್ಮ ಕಣ್ಣಾದಿ ಇಂದ್ರಿಯಗಳ ಅನುಭವಕ್ಕೆ ಬರುವ ದೇಹವನ್ನು ದೋಷ, ಧಾತು, ಮತ್ತು ಮಲಗಳ ಸಂಯೋಗವೆಂದು ವರ್ಣಿಸಿದ್ದಾರೆ. ಮೂರು (ವಾತ, ಪಿತ್ತ, ಮತ್ತು ಕಫ) ದೋಷಗಳು, ಏಳು (ರಸ, ರಕ್ತ, ಮಾಂಸ, ಮೇದ, ಅಸ್ಥಿ, ಮಜ್ಜಾ, ಮತ್ತು ಶುಕ್ರ) ಧಾತುಗಳು ಮತ್ತು ಮೂರು (ಮೂತ್ರ, ಪುರೀಷ, ಮತ್ತು ಸ್ವೇದ) ಮತ್ತೊಂದಿಷ್ಟು ಮಲಗಳು. ಪ್ರತಿ ಧಾತುವೂ ಮಲಗಳನ್ನು ಸೃಷ್ಟಿಸುತ್ತದೆ. ಈ ಮಲಗಳನ್ನು ಅತಿಯಾಗಿ ತೆಗೆದರೆ ವಾತದೋಷವು ಉಲ್ಬಣವಾಗುವುದೆಂಬ ಅನುಭವ. ಮುಂಚೆ ತಿಳಿಸಿದಂತೆ ಮಲಗಳಿಗೂ ಸ್ಥೂಲದೇಹವನ್ನು ಕಾಯ್ದುಕೊಳ್ಳುವ ಜವಾಬ್ದಾರಿ ಇದೆ. ಮಲಗಳ ಸರಿಯಾದ ನಿರ್ವಹಣೆ ಆಯುರ್ವೇದದ ಹೊಣೆ. ಇದು ದೇಹ ಮಲದ ಮಾತು.

ಮನದ ಮಲ

ಮನಸ್ಸಿನ ಬಗ್ಗೆ ಮಾತನಾಡಿದಷ್ಟೂ ಕಡಿಮೆಯೆ, ಅನುಭವಿಸುವುದೇ ಸುಲಭ. ಎಲ್ಲವು ಮನಸ್ಸಿನೊಳಗೆ ನಡೆಯುವ ಯುದ್ಧವೇ, ಶಾಂತಿಪ್ರಕ್ರಿಯೆಯೇ ಹೌದು. ಪ್ರಪಂಚದೆಲ್ಲದರ ಬಗ್ಗೆ ಸಂಬಂಧ ಹೊಂದಿಸುವ ಕೊಂಡಿ ಈ ಮನಸ್ಸು. ಮನದೊಳಗಿನ ಮಲದ ಬಗ್ಗೆ ಚಿಂತೆ ಬಿಟ್ಟು, ಚಿಂತನೆ ನಡೆಸುವ ಧೈರ್ಯ, ಸ್ಥೈರ್ಯ, ಸಾಹಸ, ಸಿದ್ಧತೆ, ಒಪ್ಪುಗೆ ಎಲ್ಲಕ್ಕೆ ಗುಂಡಿಗೆ ಗಟ್ಟಿಯಾಗಿರಬೇಕು. ಗೀತೆಯಲ್ಲಿ ಭಗವಂತ ಹೇಳುತ್ತಾನೆ, “ತ್ರಿವಿಧಂ ನರಕಸ್ಯೇದಂ…”, ಆಸೆ, ಕೋಪ, ಹಪಹಪಿತನ – ಎಲ್ಲ ಕೆಡಕುಗಳ ಬೀಜ. ಅವುಗಳಾದಿಯಾಗಿ ಅನೇಕ ವಿಧಗಳ ಮಲ ಮನಸ್ಸಿನ ಕೊಳೆ. ಇದಕ್ಕಾಗಿ ಯೋಗ.

ವಾಕ್ಕಿನ ಮಲ

ಮಾತೆಂಬುದು ಒಳ ಜಗತ್ತು, ಮತ್ತು ಸಮಾಜದ ಹೊಂದಾಣಿಕೆಗಿರುವ ಸೇತು. ಆ ಸೇತುವು ಸ್ಥಿರವಾಗಿದ್ದು, ಅನುಕೂಲವಾಗಿ, ಅಂಕುಡೊಂಕುಗಳಿಲ್ಲದಿದ್ದರೆ ಮಾತ್ರ ಸಫಲ. ಸೇತುವೆಯೇ ಅಲ್ಲಾಡುತ್ತಿದ್ದರೆ, ಪ್ರಯಾಸದಾಯಕವಾದರೆ ಮತ್ತು ತೂತುಗಳಿದ್ದರೆ ಪ್ರಯಾಣ ಸುಕರವೆ? ಆಡಿದ ಮಾತು ಮನಸ್ಸಿನ ಭಾವನೆಗಳನ್ನು ಹೋಲಬೇಕು, ತಲುಪಬೇಕಾದಲ್ಲಿ ತಲುಪಬೇಕಾದವರಲ್ಲಿ ತಟ್ಟುವ ಹಾಗೆ ಇರಬೇಕು. ಅಂದುಕೊಂಡುದ್ದೊಂದು, ಹೇಳಿದ್ದು ಮತ್ತೊಂದು, ಅರ್ಥವಾದದ್ದು ಮತ್ತೊಂದಾದರೆ ವ್ಯರ್ಥ ಮಾತು. ಈ ಮಲವನ್ನು ನಿವಾರಿಸಲು ವ್ಯಾಕರಣ.

ಇವೆಲ್ಲ ಮಲದ ನಿವಾರಣೆಗೆ ಮಹರ್ಷಿ ಪತಂಜಲಿಗಳ ಕೊಡುಗೆ, ಯೋಗಸೂತ್ರಗಳ ಮೂಲಕ, ಅಷ್ಟಾಧ್ಯಾಯಿಯ ಮಹಾಭಾಷ್ಯದ ಮೂಲಕ ಮತ್ತು ಆಯುರ್ವೇದ ವಿಜ್ಞಾನದ ಮೂಲಕ. ಅವರನ್ನು ಸ್ಮರಿಸಿ ಯೋಗದಲ್ಲಿ ಮುಂದುವರಿಯುವ ಪರಂಪರೆ ನಮ್ಮಂತಹ ಯೋಗಾಭ್ಯಾಸಿಗಳಿಗೆ ನೆಮ್ಮದಿ.

  • ಈ ಎರಡೂ ಲೇಖನಗಳನ್ನು ಕನ್ನಡ ಮತ್ತು ಇಂಗ್ಲಿಷ್‌ನಲ್ಲಿ ಬರೆದವರು ಡಾ ಸುಶ್ರುತಾ ಎಸ್, ಸಹಾಯಕ ಪ್ರಾಧ್ಯಾಪಕರು, ಅಮೃತ ವಿಶ್ವ ವಿದ್ಯಾಪೀಠಂ, ಕೊಯಮತ್ತೂರು (ನೀವು ಈ ವ್ಯಕ್ತಿಯನ್ನು study.veda@gmail.com ಇಮೇಲ್ ಮೂಲಕ ಸಂಪರ್ಕಿಸಬಹುದು)