ಶ್ರೀ ಕೃಷ್ಣ ಜನ್ಮಾಷ್ಟಮಿಯು ಗೀತೆಗೆ ನಿಕಟವಾಗಿಸುವ ಒಂದು ಸುಸಂದರ್ಭ
“ಓ, ಅರ್ಜುನ, ನೀನೊಬ್ಬ ಯೋಗಿಯಾಗು.” ಅಮರವಾದ ಈ ನುಡಿಗಳಿಂದ ಕುರುಕ್ಷೇತ್ರದ ಸಮರ ಭೂಮಿಯಲ್ಲಿ, ಭಗವಾನ್ ಕೃಷ್ಣನು ತನ್ನ ಅತ್ಯಂತ ಹೆಚ್ಚು ಮುಂದುವರೆಯಲ್ಪಟ್ಟ ಭಕ್ತನಿಗೆ, ಅಂತಿಮ ಮುಕ್ತಿಗಾಗಿ ಯೋಗ ಮಾರ್ಗವನ್ನು ಅನುಸರಿಸಲು ನಿರ್ದೇಶಿಸಿದನು. ಖಚಿತವಾಗಿಯೂ ಭಗವದ್ಗೀತೆಯು ಸ್ವರ್ಗೀಯ ಸದ್ಗ್ರಂಥವಾಗಿದ್ದು, ಪ್ರತಿಯೊಬ್ಬ ಮಾನವನು ಹೃತ್ಪೂರ್ವಕವಾಗಿ ನೆರವೇರಿಸಲೇಬೇಕಾದ ಅಂತಿಮ ವೈವಿಧ್ಯತೆಗಳನ್ನು ವಿವರಿಸುತ್ತದೆ. ಆ ಸದ್ ಗ್ರಂಥವು, ಪ್ರಭುವು ಸ್ವತಃ ಘೋಷಿಸಿರುವ ಕಾಲಾತೀತವಾದ ಹಿತೋಪದೇಶಗಳನ್ನು ಹೊಂದಿದ್ದು, ಸ್ವಲ್ಪ ದಿಗ್ಭ್ರಮೆಗೊಂಡ ಹಾಗೂ ವಿಸ್ಮಯಗೊಂಡ ಶಿಷ್ಯನಿಗಾಗಿ, ಎಲ್ಲಕ್ಕಿಂತಲೂ ಮಿಗಿಲಾಗಿ ತನ್ನ ಕರ್ಮಫಲಗಳ ಮೇಲಿನ ಮೋಹಕ್ಕೆ ಬಂಧಿಸಲ್ಪಡದೆ ತನ್ನ ಕರ್ತವ್ಯಗಳಿಗೆ ಆದ್ಯತೆ ನೀಡಲು ತಿಳಿಸುತ್ತದೆ.
ಆಧ್ಯಾತ್ಮ ಸತ್ಗ್ರಂಥವಾದ ‘ಯೋಗಿಯ ಆತ್ಮ ಕಥೆ’ ಯ ಲೇಖಕರಾದ ಶ್ರೀ ಶ್ರೀ ಪರಮಹಂಸ ಯೋಗಾನಂದರು, ಬಹಳ ವಿವರವಾಗಿ ಶ್ರೀ ಕೃಷ್ಣನು ಅರ್ಜುನನಿಗೆ ನೀಡಿರುವ ಅಮರ ಸಂದೇಶದ ನೈಜ ಅರ್ಥವನ್ನು ಗೀತೆಯ ಮೇಲಿನ ತಮ್ಮ ವ್ಯಾಖ್ಯಾನವಾದ ‘ಗಾಡ್ ಟಾಕ್ಸ್ ವಿತ್ ಅರ್ಜುನ’ ದಲ್ಲಿ ವಿವರಿಸಿದ್ದಾರೆ. ಮಹಾಭಾರತ ,ಎಂದು ಜನಪ್ರಿಯವಾಗಿ ಕರೆಸಿಕೊಳ್ಳುವ ಕುರುಕ್ಷೇತ್ರ ಸಮರದ ನಿಜವಾದ ಪ್ರಾಮುಖ್ಯತೆಯು, ಪ್ರತಿಯೊಬ್ಬ ಮನುಷ್ಯನ ಅಂತರಂಗದಲ್ಲಿ ನಿರಂತರವಾಗಿ ನಡೆಯುತ್ತಿರುವ ಯುದ್ಧದಲ್ಲಿದೆ ,ಎಂದು ಯೋಗಾನಂದಜಿಯವರು ವಿವರಿಸಿದ್ದಾರೆ. ಮನುಷ್ಯನ ಜೀವನದಲ್ಲಿ ನಮ್ಮದೇ ಸ್ವಂತ ,ಸದ್ ಪ್ರವೃತ್ತಿಗಳು ಮತ್ತು ದುಷ್ಟ ಪ್ರವೃತ್ತಿಗಳು ಹೋರಾಡಲು ಉದ್ದೇಶವಾಗಿವೆ ಮತ್ತು ಅಂತಿಮವಾಗಿ ಒಳ್ಳೆಯದು ಕೆಟ್ಟದರ ಮೇಲೆ ಮೇಲುಗೈ ಸಾಧಿಸಬೇಕಾಗುತ್ತದೆ. ಆದರೆ ನಾವು ಭಗವಂತನ ಸಮೀಪಕ್ಕೆ ಹೋಗಲು ನಿರ್ಧಾರಿತ ಪ್ರಯತ್ನ ಮಾಡುವ ಮೊದಲೇ ಇದು ಸಾಧ್ಯವಿಲ್ಲ ಮತ್ತು ಅದರ ಪರಿಣಾಮವಾಗಿ ಭೌತಿಕ ಪ್ರಪಂಚದ ಎಲ್ಲಾ ಮೋಹಗಳನ್ನು ಕಳಚುವುದರಿಂದ ಇದು ಸಾಧ್ಯ.
ಜನ್ಮಾಷ್ಟಮಿಯನ್ನು ಪ್ರತಿ ವರ್ಷವೂ ತಾಯಿ ದೇವಕಿಯ ಮಗುವಾಗಿ ಜನಿಸಿದ ಕೃಷ್ಣನ ಜನ್ಮದ ಉತ್ಸವವಾಗಿ ಆಚರಿಸುವರು. ವಿಶ್ವಾದ್ಯಂತ ವರ್ಣರಂಜಿತ ರಾಗರಂಜಿತ ಸಂಗೀತಮಯ ಉತ್ಸವವಾಗಿ ಮತ್ತು ರಾತ್ರಿಯವರೆಗೂ ಆಚರಿಸುವರು. ಸುಂದರವಾಗಿ ಅಲಂಕರಿಸಲ್ಪಟ್ಟ ದೇವಾಲಯಗಳಲ್ಲಿ ಜನರು ಸೇರುತ್ತಾರೆ ಮತ್ತೂ ತಮ್ಮ ಸ್ವಂತ ಮನೆಗಳಲ್ಲಿ ಸಹ ಪುಟ್ಟ ದೇವ ಮಂದಿರಗಳನ್ನು ಅಲಂಕರಿಸಿ ,ವಿಷ್ಣುವಿನ ಅವತಾರವಾದ ಕೃಷ್ಣ ಪರಮಾತ್ಮನ ಜನ್ಮದಿನವನ್ನು ಆನಂದದಿಂದ ಆಚರಿಸುತ್ತಾರೆ .ಆದರೆ ಸಂತರು ಹೇಳುವ ಹಾಗೆ ಜನ್ಮಾಷ್ಟಮಿಯ ನಿಜವಾದ ಆಚರಣೆಯು ನಮ್ಮ ಹೃದಯ ಮತ್ತು ಆತ್ಮಗಳಲ್ಲಿ ಇರಬೇಕು ಅಥವಾ ಆಚರಿಸಬೇಕು. ಹಾಗೆಯೇ ನಾವು ಮತ್ತಷ್ಟು ಕೃಷ್ಣ ಪರಮಾತ್ಮನಲ್ಲಿ ಶ್ರುತಿಗೂಡಬೇಕು.
ಯೋಗಾನಂದಜಿಯವರು ಯೋಗದಾ ಸತ್ಸಂಗ ಸೊಸೈಟಿ ಆಫ್ ಇಂಡಿಯಾ (ವೈ ಎಸ್ ಎಸ್) ವನ್ನು 1917ರಲ್ಲಿ ಸಂಸ್ಥಾಪಿಸಿದರು. ಅದು ಕಾಲಾತೀತ ಕ್ರಿಯಾಯೋಗ ಧ್ಯಾನ ತಂತ್ರದ ಪ್ರಸರಣಕ್ಕೆ ಅನೇಕ ರೀತಿಗಳಲ್ಲಿ ಕಾರಣವಾಯಿತು. ಸಾವಿಲ್ಲದ ಸಂತ, ಮಹಾವತಾರ ಬಾಬಾಜಿಯವರು ಕ್ರಿಯಾಯೋಗದ ಆಂತರಿಕ ಜ್ಞಾನವನ್ನು ಮಹಾನ್ ಯೋಗಾವತಾರಿ, ಲಾಹಿರಿ ಮಹಾಶಯರವರಿಗೆ ನೀಡಲಾಗಿ ,ಅವರು ಯೋಗಾನಂದಜಿಯವರ ಆಧ್ಯಾತ್ಮ ಗುರು, ಜ್ಞಾನಾವತಾರಿ, ಸ್ವಾಮಿ ಶ್ರೀ ಯುಕ್ತೇಶ್ವರ ಗಿರಿ ಅವರಿಗೆ ಈ ವಿಜ್ಞಾನವನ್ನು ಕಲಿಸಿದರು.
ಕ್ರಿಯಾಯೋಗವು ಕೃಷ್ಣ ಪರಮಾತ್ಮನಿಂದ ಭಗವದ್ಗೀತೆಯ ಎರಡು ಶ್ಲೋಕಗಳಲ್ಲಿ ಉಲ್ಲೇಖಿಸಲ್ಪಟ್ಟಿದೆ. ಇದು ಮಾನವನಿಗೆ ತಿಳಿದಿರುವ ಅತ್ಯುನ್ನತ ಜ್ಞಾನ. ಅದು ಆಧ್ಯಾತ್ಮಿಕ ಅನ್ವೇಷಕನನ್ನು ಅವನ ಗುರಿಯಾದ ಭಗವಂತನಲ್ಲಿ ತಾದಾತ್ಮ್ಯ ಹೊಂದುವ ಗುರಿಯೆಡೆಗೆ ಮುನ್ನಡೆಸುತ್ತದೆ.
ಜನ್ಮಾಷ್ಟಮಿಯ ಈ ಮಹಾ ದಿನದಂದು ನಾವೆಲ್ಲರೂ ನಮ್ಮ ಅಂತರಂಗದಲ್ಲಿರುವ ಕೃಷ್ಣನನ್ನು ಜಾಗೃತಗೊಳಿಸಿ, ಅವನ ಬೋಧನೆಗಳೊಡನೆ ಶ್ರುತಿಗೂಡಿಸಿ ,ನಮ್ಮ ಸುತ್ತಲೂ ಇರುವ ಪ್ರತಿಯೊಬ್ಬರ ಕಲ್ಯಾಣಕ್ಕಾಗಿ ಪ್ರಯತ್ನಿಸೋಣ. ಹೆಚ್ಚಿನ ಮಾಹಿತಿಗಾಗಿ : yss.org
ಲೇಖಕರು: ವಿವೇಕ್ ಅತ್ರೆ