ಏಳುನೂರು ಶ್ಲೋಕಗಳ ಈ ಗೀತೆಯು ತನ್ನ ಸಣ್ಣ ಪರಿಧಿಯಲ್ಲಿ ಪ್ರಪಂಚಕ್ಕೆ ಪುರಾತನ ಭಾರತದ ಕೊಡುಗೆಯಾದ ಅತ್ಯುತ್ತಮ ತತ್ವಕಾರ ಮತ್ತು ನೈತಿಕ ಮೌಲ್ಯಗಳನ್ನು ಒಳಗೊಂಡಿದೆ. ಉನ್ನತವಾದ ತತ್ವ ಬೋಧನೆ ಸರಳ ಸುಂದರವಾದ ಪದ ಪ್ರಯೋಗಗಳಿಂದ ಮಧುರವಾದ ಶ್ಲೋಕರೂಪದಲ್ಲಿ ಹೆಣೆಯಲ್ಪಟ್ಟಿದ್ದು ಅಭ್ಯಾಸಮಾಡಲು ಮನೋಹರವಾಗಿದೆ. ಬೋಧನೆಯು ಅದ್ಭುತವಾದ ಕ್ರಮದಿಂದ ಪ್ರತಿಪಾದಿಸಲ್ಪಟ್ಟಿದ್ದು ವಿಚಾರ ಪ್ರಚೋದಕವಾಗಿದೆ ಮತ್ತು ಅತ್ಯಂತ ಉದಾತ್ತವಾದ ಸತ್ಯವನ್ನು ಪ್ರತಿಪಾದಿಸಿರುವುದು ಒಂದು ಅತೀವ ಆಸಕ್ತಿ ಮೂಡಿಸುವ ಗ್ರಂಥವಾಗಿದೆ.
ಅತ್ಯಂತ ಪ್ರಾಚೀನ ಕಾಲದಿಂದ ನಮ್ಮ ಕಾಲದವರೆಗೂ ಭಾರತ ದೇಶದ ಪವಿತ್ರಗ್ರಂಥ ಕೇವಲ ಸಾಮಾನ್ಯ ಜನರ ಮೇಲಲ್ಲದೇ ಮನನಶೀಲರ ಮೇಲೂ ವ್ಯಾಪಕವಾಗಿ ಪ್ರಭಾವ ಬೀರುತ್ತಲೇ ಇರುವುದು ಗಮನಾರ್ಹ ಸಂಗತಿ. ಭಾರತೀಯ ಪರಂಪರೆಯ ಎಲ್ಲ ಮೌಲ್ಯಗಳನ್ನು ಪ್ರತಿಪಾದಿಸಿದ್ದು ಅವುಗಳಿಗೆ ಸೂಕ್ತ ಸ್ಥಾನಗಳನ್ನು ಕಲ್ಪಿಸಿದೆ. ಆಧ್ಯಾತ್ಮಿಕ ಸಾಹಿತ್ಯಕ ಪ್ರತಿಭೆಯುಳ್ಳ ಹಿಂದೂ ವ್ಯಾಖ್ಯಾನಕಾರರಿಗೆ ಈ ಕೃತಿಯ ಮೇಲೆ ವ್ಯಾಖ್ಯಾನ ಬರೆಯುವ ತುಡಿತವನ್ನು ನಿಯಂತ್ರಿಸಲಾಗಲಿಲ್ಲ. ಆದರೆ ಈ ವ್ಯಾಖ್ಯಾನಗಳು ನವ ಸುಶಿಕ್ಷಿತ ಹಿಂದೂವಿನ ಮೆಚ್ಚುಗೆ ಮತ್ತು ಶ್ಲಾಘನೆಗಳನ್ನು ಸಂಪಾದಿಸುವುದು ಅಂತ ವೈಚಾರಿಕ ಪಾಶ್ಚಾತ್ಯರ ಗಮನವನ್ನು ತನ್ನೆಡೆಗೆ ಸೆಳೆದುಕೊಳ್ಳುವುದು ಪುರಾತನ ಭಾರತೀಯ ಸಾಹಿತ್ಯದಲ್ಲಿನ ಒಂದು ಅಪೂರ್ವವಾದ ವೈಶಿಷ್ಟ್ಯವಾಗಿದೆ. ಈ ಗ್ರಂಥದ ಅಸಂಖ್ಯಾತ ಆವೃತ್ತಿಗಳು ಬೆಳಕನ್ನು ಕಾಣುತ್ತಲಿದ್ದು ದೇಶ ವಾಸಿಗಳಿಂದ ಸ್ವಾಗತಿಸಲ್ಪಟ್ಟಿದೆ. ಭಾರತೀಯ ಎಲ್ಲಾ ಭಾಷೆಗಳಿಗೂ ಭಾಷಾಂತರಿಸಲ್ಪಟ್ಟಿದ್ದು ಯಾವುದೇ ಧಾರ್ಮಿಕ ಅಥವಾ ಅಧ್ಯಾತ್ಮಿಕ ಲೇಖನ ಪುಸ್ತಕ ನೇರವಾಗಿ ಅಥವಾ ಪರೋಕ್ಷವಾಗಿ ಇಲ್ಲಿನ ವಿಷಯಗಳನ್ನು ಉಧಾಹಾರಣೆಯಾಗಿ ತೆಗೆದುಕೊಳ್ಳಲ್ಪಟ್ಟಿರುತ್ತದೆ .ಅಷ್ಟೇ ಏಕೆ ಈ ಕಾಲದ ದೇಶಭಕ್ತರು ಬರಯುವ ಸಾಮಾಜಿಕ, ರಾಜಕೀಯ ಪ್ರಬಂಧ, ಲೇಖನಗಳಲ್ಲಿ ಕೂಡ ಗೀತೆಯ ವಾಕ್ಯಗಳನ್ನು ಉದಾಹರಿಸುವ ತೀವ್ರವಾದ ಒಲವನ್ನು ತೋರುತ್ತಾರೆ.ಈ ಗ್ರಂಥದ ಪ್ರಭಾವವು ಪಾಶ್ಚಾತ್ಯರ ಮೇಲೆ ಏನು ಕಡಿಮೆ ಇಲ್ಲ .ಈ ಕೃತಿಯು ಇಂಗ್ಲಿಷ್, ಗ್ರೀಕ್, ಲ್ಯಾಟಿನ್, ಇಟಾಲಿಯನ್ ,ಫ್ರೆಂಚ್ ಮತ್ತು ಜರ್ಮನ್ ಭಾಷೆಗಳಿಗೂ ತರ್ಜುಮೆಗೊಂಡಿದೆ. ಇದರ ಬೋಧನೆಯ ಕಾರ್ಯಶೀಲತೆ, ಸ್ವಭಾವ, ಭಾಷೆಯ ಗೇಯತೆ ಪಾಶ್ಚಾತ್ಯರ ಮನಸ್ಸಿಗೆ ಮುದವನ್ನು ಕೊಟ್ಟಿದೆ . ಈ ಕಾರಣದಿಂದ ಇದು ಬೇರೆ ಬೇರೆ ಕಾಲದ ಬೇರೆ ಬೇರೆ ದೇಶದ ಭಿನ್ನ ಭಿನ್ನ ಬೌದ್ಧಿಕ ಮಟ್ಟದ ಜನರ ಆಸಕ್ತಿಯನ್ನು ಕೆರಳಿಸಿದೆ. ಆಧುನಿಕ ವಿಜ್ಞಾನಿಗಳ ಮನಸ್ಸಿನ ಮೇಲೆ ಹೆಚ್ಚಿನ ಮಟ್ಟದಲ್ಲಿ ಪ್ರಭಾವ ಬೀರಿದ ಇದು ಚಿಂತನಶೀಲ ವ್ಯಕ್ತಿ ಒಂದು ಕ್ಷಣ ತಡೆದು, ವ್ಯಾವಹಾರಿಕ ಜೀವನಕ್ಕೆ ಮಾರ್ಗದರ್ಶಕವಾಗಿ ಗೀತೆಯ ಸ್ಥಾನವೇನು ಎಂದು ಪ್ರಶ್ನಿಸುವಂತೆ ಮಾಡುತ್ತದೆ
ಪ್ರತಿ ಅಧ್ಯಾಯದ ಕೊನೆಯಲ್ಲಿ ಬರುವ “ಇತಿ ಶ್ರೀಮದ್ ಭಗವದ್ಗೀತಾರೂಪನಿಷತ್ಸು ಬ್ರಹ್ಮವಿದ್ಯಾಯಾಂ ಯೋಗಶಾಸ್ತ್ರೇ ಶ್ರೀಕೃಷ್ಣಾರ್ಜುನ ಸಂವಾದೇ” ಇದನ್ನು ಪರೀಕ್ಷಿಸಿದಾಗ ಇದು ಇನ್ನಷ್ಟು ಸ್ಪಷ್ಟವಾಗುತ್ತದೆ. ಈ ವಾಕ್ಯದ ಪ್ರತಿಪದಾನ್ವಯ ಮಾಡಿದಾಗ ವ್ಯಾಕರಣಬದ್ಧವಾಗಿ ಭಗವದ್ಗೀತಾಸು ಪದಕ್ಕೆ ಹೊಂದುವ ಪದ ಉಪನಿಷತ್ತು. ಲಿಂಗ, ವಚನ – ವಿಭಕ್ತಿಎರಡೂ ಪದಗಳಿಗೂ ಸಮಾನವಾಗಿದ್ದು ಬೇರೆ ಪದಗಳು ಸ್ವತಂತ್ರವಾಗಿವೆ. ಅದ್ದರಿಂದ “ಭಗವದ್ಗೀತಾಸು” ಎಂಬ ಪದವು “ಭಗವದ್ಗೀತೋಪನಿಷತ್” ಎಂಬ ಪೂರ್ಣ ಮತ್ತು ಸರಿಯಾದ ಶಿರೋನಾಮಯ ಸಂಕ್ಷಿಪ್ತ ರೂಪವಾಗಿದೆ. ಇಲ್ಲಿರುವ ಬಹು ವಚನವು ಪ್ರತಿಪಾದಿಸುವ ಉಪನಿಷತ್ತಿನ ಸಿದ್ಧಾಂತಗಳನ್ನು ಉದ್ದೇಶಿಸಿದ್ದಾಗಿದೆ. ಗೀತೆ ಎಂಬುದು ಮುಂದುವರೆದ ಸಂಕ್ಷಿಪ್ತ ರೂಪವಾಗಿದೆ. ಈ ರೀತಿಯ ಸಂಕ್ಷೇಪೀಕರಣ ಸಂಸ್ಕೃತ ಭಾಷೆಯಲ್ಲಿ ಅಪರೂಪವೇನಲ್ಲ
ಭಗವದ್ಗೀತೆ ಎಂದರೇನು? ಎಂಬ ಪ್ರಶ್ನೆಯ ಉತ್ತರದ ಮೇಲೆ ಮೂಲ ಪ್ರಶ್ನೆಯ ವಿಚಾರಣೆಯ ಯುಕ್ತಿಯನ್ನು ಅವಲಂಬಿತವಾಗಿದೆ. ಯಾರೂ ಆರೋಗ್ಯಶಾಸ್ತ್ರದ ಗ್ರಂಥಗಳಲ್ಲಿ ವ್ಯಾಕರಣದ ನಿಯಮಗಳನ್ನು, ಖಗೋಳಶಾಸ್ತ್ರದ ಪುಸ್ತಕಗಳಲ್ಲಿ ನ್ಯಾಯಕ್ಕೆ ಸಂಬಂಧಪಟ್ಟ ವಿಷಯಗಳನ್ನು ಹುಡುಕುವುದಿಲ್ಲವೆಂಬುದು ನಿರ್ವಿವಾದ. ಭಗವದ್ಗೀತೆಯಲ್ಲಿ ವ್ಯಾವಹಾರಿಕ ನೈತಿಕತೆ ಇರುವುದನ್ನು ನಾವು ಮನದಟ್ಟು ಮಾಡಿಕೂಳ್ಳುವುದಕ್ಕಾಗಿ ಈ ಗ್ರಂಥವು ಏನನ್ನು ಪ್ರತಿಪಾದಿಸುತ್ತದೆ ಎಂಬುದನ್ನು ತಿಳಿದುಕೊಳ್ಳುವುದು ಅತಿ ಅಗತ್ಯವಿದೆ. ಈ ಪ್ರಶ್ನೆಗೆ ಬೇರೆಬೇರ ಪಂಡಿತರು ಬೇರೆ ಬೇರೆ ರೀತಿಯಲ್ಲಿ ಉತ್ತರಿಸಿದ್ದಾರೆ ಕೆಲವರು ಕಲಹ ಮಾಡುತ್ತಿರುವ ಧಾರ್ಮಿಕ ಪಂಥಗಳ ಸಮೀಕರಣ ಎಂದು ಯೋಚಿಸುತ್ತಾರೆ. ಇನ್ನು ಕೆಲವರು ವರ್ಣಾಶ್ರಮ ಧರ್ಮವನ್ನು ಬೇರಲ್ಲ ಕರ್ತವ್ಯಗಳಿಗಿಂತ ಮೇಲೆತ್ತುವ ಪ್ರಯತ್ನ ಎನ್ನುತ್ತಾರೆ. ಪ್ರತಿ ಅಧ್ಯಾಯದ ಕೊನೆಯಲ್ಲಿ ಉಪಸಂಹಾರಾರ್ಥವಾಗಿ “ವ್ಯಾಸಮಹರ್ಷಿಗಳಿಂದ ರಚಿತವಾದ ಲಕ್ಷ ಶ್ಲೋಕಗಳ ಸಂಹಿತೆಯಲ್ಲಿ ಭೀಷ್ಮ ಪರ್ವದಲ್ಲಿ ಶ್ರೀ ಭಗವಂತನಿಂದ ಉಪದೇಶಿಸಿದ ಬ್ರಹ್ಮವಿದ್ಯೆಯೂ ಯೋಗಶಾಸ್ತ್ರವೂ ಆಗಿರುವ ಶ್ರೀ ಕೃಷ್ಣಾರ್ಜುನ ಸಂವಾದ ರೂಪವಾದ ಉಪನಿಷತ್ತುಗಳಲ್ಲಿ” ಎಂದು ಇದನ್ನು ಬ್ರಹ್ಮನ ತತ್ವಶಾಸ್ತ್ರ ಮತ್ತು “ಯೋಗವಿಜ್ಞಾನ” ಎಂದು ನಿರ್ಣಯಿಸಬೇಕೆಂದು ವಿದ್ವಾಂಸರ ಅಭಿಪ್ರಾಯ.
ಇಲ್ಲೊಂದು ವಿಚಾರವನ್ನು ಗಮನಿಸಬೇಕಾಗಿದೆ. ಗೀತೆಯ ಪ್ರಕಾರ ಬ್ರಹ್ಮ ಎಂದರೇನು? ಯೋಗ ಎಂದರೇನು? 8ನೇ ಅಧ್ಯಾಯದ ಮೊದಲಲ್ಲೇ ಅರ್ಜುನನು ಕೃಷ್ಣನನ್ನು ಕುರಿತು ಕೇಳಿದ ಏಳು ಪ್ರಶ್ನೆಗಳಲ್ಲಿ ಮೊದಲನೆಯದು ಆ ಬ್ರಹ್ಮ ಎಂಬುದು ಯಾವುದು? ಕೊಟ್ಟ ಉತ್ತರ ಪರಮ ವಾದ ಅಕ್ಷರವೇ ಬ್ರಹ್ಮವುಹದಿಮೂರನೆಯ ಅಧ್ಯಾಯದಲ್ಲಿ ಮತ್ತೆ ಬ್ರಹ್ಮವನ್ನು ವಿವರಿಸಿದೆ, “ಯಾವುದನ್ನು ಅರಿಯಬೇಕು ಮತ್ತು ಅರಿತರ ಅಮೃತತ್ವವನ್ನು ಹೊಂದುವೆ ಅದನ್ನು ತಿಳಿಸುತ್ತೇನೆ ಅದು ಅನಾದಿಯಾದ ಪರಬ್ರಹ್ಮವು ಮುಂದುವರೆದು ದೀರ್ಘವಾದ ವಿವರಣೆಯನ್ನು, ತೋರಿಕೆಗೆ ಪರಸ್ಪರ ವಿರುದ್ಧವೋ ಎನ್ನಿಸುವ ಹೇಳಿಕೆಗಳಿಂದ ಕೊಡಲ್ಪಟ್ಟಿದೆ ಈ ಎರಡು ವಾಕ್ಯಾಂಶಗಳಿಂದ
ತಿಳಿಯುತ್ತದೆ.
ಇನ್ನು ಯೋಗ ಎಂಬ ಪದವನ್ನು ಕುರಿತು ಬ್ರಹ್ಮ ಶಬ್ದದಂತೆ ಎರಡು ಸ್ಥಳಗಳಲ್ಲಿ ಉಲ್ಲೇಖಿಸಲಾಗಿದೆಒಂದರಲ್ಲಿ ಶಬ್ದವನ್ನು ನಿರೂಪಿಸಲಾಗಿದೆಇನ್ನೊಂದೆಡೆಯಲ್ಲಿ ಪದದ ಅರ್ಥವು ಓದುಗರ ಮನಸ್ಸಿಗೆ ಹತ್ತುವಂತ ಸಾಮಾನ್ಯ ವಿವರಣೆ ನೀಡಲಾಗಿದೆ. ಎರಡನೇ ಅಧ್ಯಾಯದ 48ನೇಯ ಶ್ಲೋಕದಲ್ಲಿ ‘’ಸಮತ್ವಂ ಯೋಗಉಚ್ಯತೆ” ಸಮತ್ವವು ಯೋಗವೆನಿಸುವುದು ಆರನೇ ಅಧ್ಯಾಯದ 20ರಿಂದ 23 ಶ್ಲೋಕದವರೆಗೆ ಯೋಗದ ವಿವರಣೆ ಇಂತಿದೆಯಾವಾಗ ಚಿತ್ತವು ಸುಮ್ಮನಾಗುವುದೋ, ಯಾವಾಗ ಆತ್ಮನಿಂದ ಆತ್ಮನನ್ನು ಕಂಡುಕೊಂಡು ತನ್ನಲ್ಲಿ ಸಂಪನ್ನವಾಗುವರೋ, ಬುದ್ಧಿಗ್ರಾಹ್ಯವಾದ, ಅತೀಂದ್ರಿಯವಾದ, ಅತ್ಯಂತಿಕವಾದ ಯಾವ ಸುಖವುಂಟೋ, ಅದನ್ನು ಯಾವಾಗ ಅರಿತುಕೊಳ್ಳುವನೋ, ಯಾವಾಗ ತತ್ವದಲ್ಲಿ ನೆಲೆನಿಂತು ಅಲುಗಾಡದೆ ಇರುವನೂ, ಯಾವ ಲಾಭವನ್ನು ಹೊಂದಿದ ಬಳಿಕ ಮಿಕ್ಕ ಲಾಭವನ್ನು ಅದಕ್ಕಿಂತ ಹೆಚ್ಚಿನದಂದು ಎಣಿಸುವುದಿಲ್ಲವೋ, ಯಾವುದರಲ್ಲಿ ನಿಂತವನಾಗಿ ಭಾರಿ ದುಃಖದಿಂದಲೂ ವಿಚಲಿತನಾಗನೋ ದುಃಖ ಸಂಯೋಗ ವಿಯೋಗವಾದ ಅದನ್ನು ಯೋಗವೆಂದು ತಿಳಿಯಬೇಕು.
ಸಮಗ್ರ ಗೀತೆಯಲ್ಲಿ ಬೇರೆಲ್ಲೂ ಯೋಗ ಮತ್ತು ಬ್ರಹ್ಮ ಶಬ್ದಗಳು ಚರ್ಚೆಗೆ ಒಳಪಟ್ಟಿಲ್ಲ. ಈಎರಡು ಶಬ್ದಗಳು ಉದಾರವಾಗಿ ಅಲ್ಲಲ್ಲಿ ಬಳಸಲಾಗಿದೆಮೇಲೆ ಹೇಳಿದ ಸಣ್ಣ ವಾಕ್ಯಗಳು ಪದಗಳ ನಿರೂಪಣೆಯಾಗಿದ್ದು ದೊಡ್ಡ ವಾಕ್ಯಗುಚ್ಛಗಳು ಅದರ ವಿವರಣೆಯಾಗಿದೆ. ಯೋಗ ಪದವು ನಿರೂಪಣ ಮತ್ತು ವಿವರಣೆಯಲ್ಲಿ ಸಮತ್ವವನ್ನು ಸೂಚಿಸಿದರೂ, ಯೋಗ ಪದದ ಮುಖ್ಯಾರ್ಥ ಒಂದುಗೂಡುವಿಕೆಯೇ (ಸಂಯೋಗ) ಆಗಿದ್ದರೂ ವಿಪರೀತ ಲಕ್ಷಣದಿಂದ ದುಃಖ ಸಂಯೋಗದ ಯೋಗ ಎಂಬರ್ಥದಲ್ಲಿ ಬಳಸಲಾಗಿದೆ. ಸತ್ಯದ ಸಿದ್ಧಾಂತವನ್ನು ಪ್ರಸ್ತಾಪಿಸುತ್ತದೆ. ಸತ್ಯವನ್ನು ಸಾಕ್ಷಾತ್ಕರಿಸಿಕೊಳ್ಳಲು ಬೇಕಾದ ನಿಯಮಗಳನ್ನು ಉಪದೇಶಿಸುತ್ತದೆ. ಗೀತಯಲ್ಲಿನ ಯೋಗವು ಸತ್ಯವನ್ನು ಸಾಕ್ಷಾತ್ಕರಿಸಲು ಸಾಧನ. ಈ ಸಾಧನವನ್ನು ಮುಟ್ಟಲು ಯಾವುದು ಸಹಾಯ ಮಾಡುವುದೋ ಅದೆಲ್ಲವನ್ನು ಯೋಗವೆಂದು ಕರೆದಿದೆ. ಗೀತೆಯ ಪ್ರತಿ ಅಧ್ಯಾಯವು ಪ್ರತ್ಯೇಕ ಪ್ರತ್ಯೇಕ ಯೋಗಗಳೊಡನೆ ವ್ಯವಹರಿಸುತ್ತದೆಮುಖ್ಯಾರ್ಥದಲ್ಲಿ ಯೋಗವು ಸಮತ್ವವನ್ನು ಹೊಂದುವ ಚಾತುರ್ಯವೇ ಆಗಿದೆ. ಸಂಸ್ಕೃತ ಭಾಷೆಯಲ್ಲಿ ಯೋಗ ಪದಕ್ಕೆ ಅನೇಕ ಅರ್ಥಗಳಿದ್ದರೂ ಗೀತೆಯ ಯೋಗದ ಬಗ್ಗೆ ಮಾತನಾಡುವಾಗ ಆ ಎಲ್ಲ ಅರ್ಥಗಳಿಂದ ದೂರವಿರುವುದು ವಾಸಿ.
ಗೀತೆಯು ಬ್ರಹ್ಮವಿದ್ಯೆ ಮತ್ತು ಯೋಗ ಶಾಸ್ತ್ರಗಳ ಪ್ರತಿಪಾದನೆಯಾದರೂ, ಬಹುಪಾಲು ಯೋಗ ಶಾಸ್ತ್ರವೇ ವ್ಯಾಪಿಸಿದೆ. ಬೌದ್ಧಿಕವಾಗಿ ತತ್ವಶಾಸ್ತ್ರದ ಸಮಸ್ಯೆಗಳನ್ನು ಚರ್ಚಿಸುವ ಸಲುವಾಗಿ ಅಲ್ಲದೆ, ಯೋಗ ಸಿದ್ಧಾಂತವನ್ನು ಅದಕ್ಕೆ ಆಧಾರವಾಗಿರುವ ತಾತ್ವಿಕ ಸತ್ಯಗಳನ್ನು ಉಲ್ಲೇಖಿಸಲಾಗಿದೆ. ತತ್ವಜ್ಞಾನವನ್ನು ನಿತ್ಯ ಜೀವನದ ಅನುಭವದ ಮಟ್ಟಕ್ಕೆ, ಅದರ ಹೊಳಪು ಒಂದಿನಿತೂ ಮಾಸದಂತೆ ತಿಳಿಸಲಾಗಿದೆ. ತಾತ್ವಿಕ ಸತ್ಯಗಳನ್ನು ಅತಿ ಸರಳ ರೂಪದಲ್ಲಿ ಪ್ರತಿಪಾದಿಸಿದ್ದು ಸಾಮಾನ್ಯರಲ್ಲಿ ಸಾಮಾನ್ಯ ಬುದ್ಧಿಮತ್ತೆಯು ಅರ್ಥಮಾಡಿಕೊಂಡು ದೈನಂದಿನ ಜೀವನದಲ್ಲಿ ಅನುಸರಿಸುವಂತಿದೆ. ವೇದಾಂತದ ಪರಮ ಸತ್ಯಗಳು ಅಷ್ಟೇ ಸರಳವಾಗಿದ್ದು ಪ್ರತಿಯೊಬ್ಬನು ಪ್ರತಿನಿತ್ಯದ ವ್ಯಾವಹಾರಿಕ ಜೀವನದಲ್ಲಿ ಅಳವಡಿಸಿಕೊಳ್ಳಬಲ್ಲದ್ದು, ಅಳವಡಿಸಿಕೊಳ್ಳಬೇಕಾದದ್ದು ಎಂದು ತೋರಿಸಿಕೊಡುವುದು ಗೀತೆಯ ಪರಮಲಕ್ಷ್ಯ. ಅಂತೆಯೇ ಧರ್ಮ ಎಂಬುದು ಜೀವನದಲ್ಲಿ ಅನುಷ್ಠಾನಕ್ಕೆ ತಂದ ಶಾಸ್ತ್ರಕ್ಕಿಂತ ಬೇರೆಯಲ್ಲ, ಗೀತೆಯ ಯೋಗಶಾಸ್ತ್ರ ಎನ್ನುವುದು ಪ್ರತಿಯೊಬ್ಬನು ಜೀವನದ ಯಾವುದೇ ಘಟ್ಟ ವಿರಲಿ, ಬೌಧಿಕಸ್ಥರ ಎಂತ ಇರಲಿ ಶಾಸ್ತ್ರವನ್ನು ಅರಿತು ಅವರವರ ಯೋಗ್ಯತಾನುಸಾರ ಅದನ್ನು ಜೀವನದ ಪ್ರತಿ ನಿಮಿಷದಲ್ಲೂ ಆಚರಣೆಗೆ ತರಬಹುದು ಎಂದು ತೋರಿಸುತ್ತದೆ. ಶಾಸ್ತ್ರಕ್ಕೂ ದೈನಂದಿನ ಜೀವನಕ್ಕೂ ಬಹಳ ವೈರುಧ್ಯವಿದೆ ಎಂಬ ಕಲ್ಪನೆಯನ್ನು ಅಲ್ಲವೆಂದು ತಿಳಿಸಿ ಯೋಗಶಾಸ್ತ್ರದ ಆಚರಣೆ ಇಲ್ಲೇ ಈಗಲೇ ಪರಮಾನಂದವನ್ನು ಹೊಂದುವಂತೆ ಮಾಡುತ್ತದೆ ಎಂಬುದನ್ನು ಗೀತೆಯು ಗುರಿಮಾಡಿ ತೋರಿಸುತ್ತದೆ. ಯೋಗಶಾಸ್ತ್ರವು ವೇದಾಂತದ ಪ್ರಾಯೋಗಿಕ ಭಾಗವನ್ನು ವಿಷದಗೊಳಿಸುತ್ತದೆ ಮತ್ತು ಹೊಂದಬೇಕಾದ ಮಾದರಿ ವ್ಯಕ್ತಿತ್ವವನ್ನು ಪ್ರಸ್ತುತಗೊಳಿಸುತ್ತದೆ.
ಗೀತೆಯ ಪ್ರಾಯೋಗಿಕ ಕೆಯು ವಿವಿಧವಾದ ಮನಸ್ಸುಗಳನ್ನು ಅದರ ಪ್ರವೃತ್ತಿಗಳನ್ನು ಗುರುತಿಸುತ್ತದೆ. ಸತ್ಯವು ಒಂದೇ ಆಗಿದ್ದು ಜೀವನದ ಅಂತಿಮ ಗುರಿಯಾಗಿದೆ. ಆದರೆ ಎಲ್ಲ ಸ್ತರದವರಿಗೂ ಒಂದೇ ಮಾರ್ಗವನ್ನು ಅನುಸರಿಸುವಂತೆ ಆಗ್ರಹ ಪಡಿಸಲಾಗುವುದಿಲ್ಲ. ವೈದ್ಯನಿಗೆ ಎಲ್ಲ ರೋಗಿಗಳ ಪೂರ್ಣ ಅರೋಗ್ಯವೇ ಉದ್ದೇಶವಾದರೂ ಎಲ್ಲರಿಗೂ ಒಂದೇ ರೀತಿಯ ಚಿಕಿತ್ಸಾ ಕ್ರಮವನ್ನು ಬಳಸಲಾಗುವುದಿಲ್ಲ ಅಲ್ಲವೇ? ವೈದ್ಯನು ತನ್ನ ಚಿಕಿತ್ಸಾ ಪದ್ಧತಿಗೆ ರೋಗಿಯ ವಯೋಮಾನ, ಲಿಂಗ ಪ್ರಸ್ತುತ ಆರೋಗ್ಯ, ರೋಗಿಯ ಪ್ರವೃತ್ತಿ ಇವುಗಳನ್ನು ಗಮನದಲ್ಲಿಡಬೇಕಾಗುತ್ತದೆ. ಅದೇ ರೀತಿ ಧರ್ಮವೂ ಬಹುಸಂಖ್ಯೆಯ ಜನರಿಗೆ ಪ್ರಾಯೋಗಿಕವಾಗಲು ಅದನ್ನರಸುವವರ ಅವಶ್ಯಕತೆಗಳಿಗ ಅನುಗುಣವಾಗಿ ಅವಕಾಶವನ್ನು ಒದಗಿಸಬೇಕು. ಭಗವದ್ಗೀತೆಯು ಈ ದಿಶೆಯಲ್ಲಿ ಪ್ರಯತ್ನ ಮಾಡಿದೆ.ಹಂಬಲಿಸುವ ಭಕ್ತರನ್ನು ಅರ್ತ, ಜಿಜ್ಞಾಸು, ಅರ್ಥಾರ್ಥಿ ಮತ್ತು ಜ್ಞಾನಿ ಎಂದು ನಾಲ್ಕು ವಿಧವಾಗಿ ವಿಭಾಗಿಸಲಾಗಿದೆ. ಯಾವ ಜೀವನಲ್ಲಿ ಯಾವ ಗುಣಧರ್ಮವು ಪ್ರಬಲವಾಗಿರುವುದೋ ಆ ಗುಂಪಿಗೆ ಅವನನ್ನು ಸೇರಿಸಲಾಗುತ್ತದೆ. ಯಾವುದೇ ಎರಡು ಅಂತ:ಕರಣವೂ ಸರ್ವ ಸಮಾನವಾಗಿರಲಾರದಾದರೂ, ಈ ರೀತಿಯ ವಿಶಾಲವಾದ ವಿಭಾಗವು ವ್ಯವಹಾರಕ್ಕೆ ಸಾಕೆಂದು ಗೀತೆ ಹೇಳುತ್ತದೆ ಪ್ರತಿಯೊಂದು ವಿಭಾಗದಲ್ಲೂ ಹೊಂದಬೇಕಾದ ಗುರಿಯು ಒಂದೇ ಆದರೂ ಒಂದೊಂದು ವಿಭಾಗಕ್ಕೂ ಪ್ರತ್ಯೇಕ ಯೋಗವಿದೆ.
- ರಾಹುಲ್ ರಾಜಶೇಖರ ಭಟ್, ಸಹಾಯಕ ಪ್ರಾಧ್ಯಾಪಕ, ವೇದಾಂತ ವಿಭಾಗ
ರಾಜೀವ್ ಗಾಂಧಿ ಪರಿಸರ, ಕೇಂದ್ರೀಯ ಸಂಸ್ಕೃತ ವಿಶ್ವವಿದ್ಯಾಲಯ, ಶೃಂಗೇರಿ
(ಈ ಲೇಖನದಲ್ಲಿ ವ್ಯಕ್ತಪಡಿಸಿರುವ ಮಾಹಿತಿ ಮತ್ತು ವಿಷಯಗಳು ಲೇಖಕರ ಸ್ವಂತ ಅನುಭವ ಮತ್ತು ಅಭಿಪ್ರಾಯಗಳಾಗಿವೆ. ಇಲ್ಲಿ ವ್ಯಕ್ತ ಪಡಿಸಿರುವ ಯಾವುದೇ ಮಾಹಿತಿ ಮತ್ತು ವಿಷಯಗಳಿಗೆ ಕನ್ನಡ ಯೋಗವಾಣಿಯಾಗಲಿ ಅಥವಾ IYA ಕರ್ನಾಟಕ ರಾಜ್ಯ ಅಧ್ಯಾಯವಾಗಲಿ ಜವಾಬ್ದಾರಿಯಲ್ಲ.)