ಯೋಗ ವಸಿಷ್ಠ – ಲೇಖನ ಸರಣಿ
ಯೋಗವಾಸಿಷ್ಠ – ಒಂದು ಪರಿಚಯ
ಯೋಗವಾಸಿಷ್ಠ ತತ್ತ್ವಶಾಸ್ತ್ರ ಸಂಬಂಧಿತವಾದ ಒಂದು ಗ್ರಂಥ. ಇದರ ಸರಿಯಾದ ಕಾಲ, ನಿಜವಾದ ಕರ್ತೃವಿನ ಬಗ್ಗೆ ಖಚಿತವಾಗಿ ತಿಳಿದು ಬಂದಿಲ್ಲವಾದರೂ ವಾಲ್ಮೀಕಿ ಮಹರ್ಷಿಗಳೊಂದಿಗೆ ಇದರ ಜೋಡಣೆಯಾಗಿದೆ.ಬೃಹತ್‌ಗ್ರಂಥವಾದ ಇದರಲ್ಲಿ ೨೯,೦೦೦ ಶ್ಲೋಕಗಳಿವೆ.ಇದರ ಸಂಕ್ಷಿಪ್ತ ರೂಪವೂ ಇದ್ದು,ಅದರಲ್ಲಿ ೬,೦೦೦ ಶ್ಲೋಕಗಳಿವೆ.ಅದನ್ನು ʻಲಘು ಯೋಗವಾಸಿಷ್ಠʻ ಎಂದೂ ಕರೆಯುತ್ತಾರೆ.
ಯೋಗವಾಸಿಷ್ಠವನ್ನು ಮಹಾರಾಮಾಯಣ, ಆರ್ಷರಾಮಾಯಣ, ಯೋಗವಾಸಿಷ್ಠ ರಾಮಾಯಣ, ವಾಸಿಷ್ಠ ರಾಮಾಯಣ, ಜ್ಞಾನ ವಾಸಿಷ್ಠ ಎಂದು ಅನೇಕ ಹೆಸರುಗಳಿಂದ ಕರೆಯುತ್ತಾರೆ. ವಸಿಷ್ಠ ಮಹರ್ಷಿಗಳು ಮತ್ತು ಅಯೋಧ್ಯೆಯ ರಾಜಕುಮಾರ ಶ್ರೀರಾಮನ ನಡುವೆ ನಡೆಯುವ ಸಂಭಾಷಣೆಯ ರೂಪದಲ್ಲಿರುವ ಈ ಗ್ರಂಥ ಆರು ಪುಸ್ತಕಗಳಾಗಿ ವಿಭಾಗವಾಗಿದೆ. ಒಂದೊಂದು ಪುಸ್ತಕವೂ ಭಾರತೀಯ ಸಂಸ್ಕೃತಿಯ ಪ್ರಕಾರ ಮಾನವನ ಬದುಕಿನ ಅಂತಿಮ ಹಂತವಾದ ಮೋಕ್ಷಪ್ರಾಪ್ತಿಯ ಕಡೆಗೆ ಹಂತಹಂತವಾಗಿ ಕರೆದೊಯ್ಯುವ ಮಾರ್ಗಕ್ಕೆ ಸಂಬಂಧಿಸಿದಂತೆ ವಿಚಾರಗಳನ್ನು ತೆರೆದಿಡುತ್ತಾ ಹೋಗುತ್ತದೆ.ವೈರಾಗ್ಯ ಪ್ರಕರಣ,ಮುಮುಕ್ಷು ವ್ಯವಹಾರ ಪ್ರಕರಣ,ಉತ್ಪತ್ತಿ ಪ್ರಕರಣ,ಸ್ಥಿತಿ ಪ್ರಕರಣ,ಉಪಶಮ ಪ್ರಕರಣ,ಮತ್ತು ನಿರ್ವಾಣ ಪ್ರಕರಣ ಎಂಬ ಆರು ಪ್ರಕರಣಗಳಲ್ಲಿ ಇವೆಲ್ಲವೂ ಇವೆ.ಆರನೆಯ ಪುಸ್ತಕದಲ್ಲಿ ಪರಮಸುಖದ,ಆನಂದದ ಸ್ಥಿತಿಯ ವರ್ಣನೆಯಿದೆ.
ಮೊದಲನೆಯ ಪುಸ್ತಕದಲ್ಲಿ ಜೀವನಶೈಲಿಯನ್ನು ಕುರಿತು ಪ್ರಸ್ತಾಪಿಸಲಾಗಿದೆ.ಬದುಕಿನಲ್ಲಿ ಎದುರಾಗುವ ನೋವು,ಕಷ್ಟ ಮತ್ತು ಈ ಜಗತ್ತಿನ ನಶ್ವರತೆಯ ಕುರಿತು ಇರುವ ತಿರಸ್ಕಾರವನ್ನು ಹೊಂದಿರುವುದನ್ನು ತಿಳಿಸುತ್ತದೆ. ಎರಡನೆಯ ಪುಸ್ತಕದಲ್ಲಿ ಶ್ರೀರಾಮನ ಪಾತ್ರದ ಮೂಲಕ ಮುಕ್ತಿಗಾಗಿ ಹಂಬಲವನ್ನು ಹಾಗೂ ಅಂತಹ ಮುಕ್ತಿಗಾಗಿ ಬಯಸುವವರ ರೀತಿಯನ್ನು ವಿವರಿಸುತ್ತದೆ.ಮೂರನೆಯ ಮತ್ತು ನಾಲ್ಕನೆಯ ಪುಸ್ತಕಗಳಲ್ಲಿ ಮುಕ್ತಿಯು ಆಧ್ಯಾತ್ಮಿಕ ಜೀವನದ ಮೂಲಕವೇ ಲಭಿಸುತ್ತದೆಂದೂ, ಅದಕ್ಕಾಗಿ ಸ್ವತಃ ಪ್ರಾಮಾಣಿಕ ಪ್ರಯತ್ನವೂ ಅತ್ಯಗತ್ಯವೆಂದೂ ಹೇಳಿದೆ. ಮತ್ತು ವಿಶೇಷವೆಂದರೆ ಈ ಎಲ್ಲವನ್ನೂ ಕಥೆಗಳ ಮೂಲಕ ತಿಳಿಸಲಾಗಿದೆ.ಅವುಗಳಲ್ಲಿ ವಿಶ್ವೋತ್ಪತ್ತಿ ಶಾಸ್ತ್ರವಲ್ಲದೆ,ಅಧ್ಯಾತ್ಮ ವಿದ್ಯೆಗೆ ಸಂಬಂಧಿಸಿದ ತತ್ತ್ವಗಳನ್ನು ವಿವರಿಸಲಾಗಿದೆ. ಈ ಎರಡೂ ಪುಸ್ತಕಗಳು ಮನುಷ್ಯನ ಅಗಾಧವಾದ ಮನಶ್ಶಕ್ತಿ ಹಾಗೂ ಆತನ ಸರ್ಜನಶೀಲತೆಯನ್ನು ಒತ್ತಿ ಹೇಳುತ್ತವೆ.
ಐದನೇ ಪುಸ್ತಕದಲ್ಲಿ ಧ್ಯಾನದ ಮಹತ್ತ್ವ ಹಾಗೂ ಶಕ್ತಿಯನ್ನು ಅದು ಮೋಕ್ಷಸಾಧನೆಗೆ ನೆರವಾಗುವುದೆಂಬ ಅಂಶವನ್ನೂ ತಿಳಿಸುತ್ತದೆ. ಆರನೆಯ ಪುಸ್ತಕದಲ್ಲಿ ಎಲ್ಲದರ ಚರ್ಚೆಯಿಂದ ಜ್ಞಾನೋದಯ ಹೊಂದಿದ ಮತ್ತು ಪರಮಸುಖವನ್ನು ಪಡೆದ ಶ್ರೀರಾಮನ ಸ್ಥಿತಿಯನ್ನು ವಿವರಿಸುತ್ತದೆ.
ಸೃಷ್ಟಿ,ಜಗತ್ತು,ಮೋಕ್ಷದ ವಿಚಾರಗಳಿಂದ ಕೂಡಿದ ಯೋಗವಾಸಿಷ್ಠದ ಬೋಧನೆಗಳು ಅದ್ವೈತ ವೇದಾಂತದಲ್ಲಿರುವಂತೆ ತತ್ತ್ವಶಾಸ್ತ್ರದ ಆಧಾರವನ್ನು ಹೊಂದಿವೆ.ಆದುದರಿಂದ ನೇರ ಬೋಧನೆಯು ಅರ್ಥೈಸಿಕೊಳ್ಳಲು ಕಷ್ಟಸಾಧ್ಯವಾಗಿರುವುದರಿಂದ ಎಲ್ಲರಿಗೂ ಮನಸ್ಸಿಗೆ ಹಿಡಿಸುವಂತಹ ಕಥೆಯ ಮಾಧ್ಯಮವನ್ನು ಇಲ್ಲಿ ಬಳಸಿಕೊಳ್ಳಲಾಗಿದೆ.ಇವು ಕಲ್ಪಿತ,ಪೌರಾಣಿಕ ಮತ್ತು ನೀತಿಕಥೆಗಳ ಮೂಲಕ ವ್ಯಕ್ತವಾಗಿವೆ.ಇಲ್ಲಿ ಹೇಳಿರುವ ತತ್ತ್ವಗಳ ಸಾರವೆಂದರೆ ಈ ಸಮಸ್ತ ಸೃಷ್ಟಿಯು ಪರಮಾತ್ಮನಿಂದ ಪ್ರತ್ಯೇಕವಾದುದಲ್ಲವೆಂದೂ ಅದೂ ಕೂಡ ಅವನದೇ ಪ್ರತಿಬಿಂಬವೇ ಎಂಬುದು.ಅಂದರೆ ,ಇಲ್ಲಿ ಹೇಳಿರುವ ಎಲ್ಲ ಕಥೆಗಳೂ ಸತ್ಯದರ್ಶನವನ್ನು ಮೂಡಿಸುವ ಉದ್ದೇಶದಿಂದಲೇ ರೂಪುಗೊಂಡಿವೆ.
ಅಯೋಧ್ಯೆಯಲ್ಲಿ ದಶರಥನ ಆಸ್ಥಾನದಲ್ಲಿ ಹಲವು ಋಷಿಮುನಿಗಳ,ದೇವತೆಗಳ,ವಿಪ್ರೋತ್ತಮರ ಸಮ್ಮುಖದಲ್ಲಿ ಶ್ರೀರಾಮನು ಇಪ್ಪತ್ತೆರಡು ದಿನಗಳ ಕಾಲ ಕೇಳಿದ ಹಲವು ಪ್ರಶ್ನೆಗಳಿಗೆ ಕಥೆಗಳ ಮೂಲಕ,ಉಪನ್ಯಾಸಗಳ ಮೂಲಕ ಅಧ್ಯಾತ್ಮದ ವಿಷಯಗಳಿಗೆ ಸಂಬಂಧಿಸಿದ ಅಂಶಗಳನ್ನು ವಸಿಷ್ಠ ಮಹರ್ಷಿಗಳು ತಿಳಿಸುತ್ತಾರೆ.ಇಲ್ಲಿ ವಸಿಷ್ಠರೇ ಗುರು.ಶ್ರೀರಾಮನೇ ಶಿಷ್ಯ. ಗುರು-ಶಿಷ್ಯರ ಸಂವಾದವೇ ಈ ಕೃತಿ.ಇದರ ವಾಹಕ ವಾಲ್ಮೀಕಿ ಮಹರ್ಷಿಗಳು..ರಾಜ್ಯಾಭಿಷೇಕಕ್ಕೆ ಮೊದಲು ಚೈತ್ರಯಾತ್ರೆ ಮುಗಿಸಿ ಮರಳಿದ ಶ್ರೀರಾಮನು ಅಲ್ಲೆಲ್ಲ ಕಂಡ.ಪಡೆದ ಅನುಭವಗಳಿಂದ ಅಕಾಲ ವೈರಾಗ್ಯಕ್ಕೆ,ಖಿನ್ನತೆಗೆ ಒಳಗಾಗಿದ್ದರಿಂದ, ದಶರಥನ ಕೋರಿಕೆಯಂತೆ ವಸಿಷ್ಠರು ಶ್ರೀರಾಮನಿಗೆ ಆಧ್ಯಾತ್ಮಿಕವಾದ ವಿಚಾರಗಳನ್ನು ಉಪದೇಶಿಸಿದ್ದೇ ಈ ಯೋಗವಾಸಿಷ್ಠದ ವಸ್ತು. ಅಂದರೆ ಇದು ರಾಮಾಯಣಕ್ಕಿಂತಲೂ ಮೊದಲಿನದು.
ಇಲ್ಲಿ ಜ್ಞಾನಯೋಗವನ್ನು ತಿಳಿಸಲು ಶಾಸ್ತ್ರದ ಶುಷ್ಕಶೈಲಿಯನ್ನು ಅನುಸರಿಸದೆ,ಸುಲಭವಾಗಿ ಅರ್ಥವಾಗುವ ಕಥಾಮಾಧ್ಯಮವನ್ನು ಬಳಸಲಾಗಿದೆ.ಈ ಯೋಗವಾಸಿಷ್ಠದ ಧ್ಯೇಯ ಪರಮಾರ್ಥವನ್ನು ಲೌಕಿಕ ಜೀವನದೊಂದಿಗೆ ಸಮೀಕರಿಸುವುದಾಗಿದೆ.ತನ್ನ ಅಸ್ತಿತ್ವದ ಮೂಲವನ್ನೇ ಅರಿಯದಿದ್ದರೆ,ಮನುಷ್ಯನು ಕಡೆಯತನಕ ಅಪೂರ್ಣತೆಯ ಗೊಂದಲದಲ್ಲಿಯೇ ಮುಳುಗಿರಬೇಕಾಗುತ್ತದೆ.ಭಗವದ್ಗೀತೆಯಂತೆಯೇ ಇದು ಕೂಡ ವಿಷಾದಯೋಗದಿಂದಲೇ ಆರಂಭವಾಗುತ್ತದೆ.ಅಲ್ಲಿ ಕೃಷ್ಣ ಅರ್ಜುನನಿಗೆ,ಇಲ್ಲಿ ವಸಿಷ್ಠರು ಶ್ರೀರಾಮನಿಗೆ ಮಾರ್ಗದರ್ಶಿಗಳಾಗುತ್ತಾರೆ.”ಕರ್ತವ್ಯವನ್ನು ಬಿಟ್ಟರೆಮನುಷ್ಯನಿಗೆ ಸದ್ಗತಿಯು ದೊರೆಯಲಾರದು.ಪ್ರತಿಯೊಬ್ಬರೂ ತಮ್ಮ ತಮ್ಮ ಪಾಲಿನ ಕರ್ತವ್ಯವನ್ನು ನಿರ್ವಹಿಸಲೇಬೇಕು. (ಕರ್ಮಣ್ಯೇ ವಾಧಿಕಾರಸ್ಥೇ ಮಾಫಲೇಷು ಕದಾಚನ) ಎಂದು ಹೇಳಿದೆ.
ಪ್ರಶಾಂತವಾದ ಸಮಸ್ಥಿತಿಯ ಭಾವವನ್ನು ಪಡೆದುಕೊಳ್ಳುವುದಾದರೂ ಹೇಗೆ? ಮೋಹ,ವ್ಯಾಮೋಹಗಳ ಆಕರ್ಷಣೆಯನ್ನು,ಅವುಗಳು ಮನಸ್ಸಿನ ಮೇಲೆ ಬೀರುವ ಪ್ರಭಾವದಿಂದ ಆಗುವ ಮನದ ತಾಕಲಾಟದಿಂದ ಪಾರಾಗಿ,ಕೇವಲ ಕರ್ತವ್ಯಮನಸ್ಕರಾಗಿ ಕರ್ಮಗಳನ್ನು ನಿರ್ವಹಿಸುವುದು ಸಾಧ್ಯವೆ?ಈ ಎಲ್ಲ ಸಮಸ್ಯೆಗಳಿಗೆ ಪರಿಹಾರವನ್ನು ನೀಡಿರುವುದೇ ಯೋಗವಾಸಿಷ್ಠದಲ್ಲಿರುವ ಸತ್ತ್ವ.ದು ಮನಸ್ಸಿನ ಮೇಲೆ ನಿಯಂತ್ರಣವನ್ನು ಹೊಂದಲು,ಸಮಸ್ತ ಅಂತಸ್ಸಂಕಲ್ಪಗಳನ್ನು ಬ್ರಹ್ಮಭಾವದಲ್ಲಿಯೇ ವಿಲೀನಗೊಳಿಸಲು ಆದೇಶ ನೀಡಿ ಸಹಕರಿಸುತ್ತದೆ.
ಇಲ್ಲಿ ಮುಖ್ಯವಾಗಿ ವ್ಯಕ್ತಿಯು ತನ್ನ ಆತ್ಮೋದ್ಧಾರವನ್ನು ಸಾಧಿಸಲು ಏನು ಮಾಡಬೇಕೆಂಬುದನ್ನು ವಿವೇಚಿಸುತ್ತ ಅದಕ್ಕೆ ದಾರಿ ತೋರುವ ಅನೇಕ ಕರ್ಮಯೋಗಿಗಳ (ಬಲಿ,ಪ್ರಹ್ಲಾದ ಮುಂತಾದವರ) ಕಥೆಗಳನ್ನು ತಿಳಿಸಲಾಗಿದೆ.ಕರ್ಮ ಮತ್ತು ಜ್ಞಾನದ ಸಮನ್ವಯದಿಂದಲೇ ಜೀವನದ ಸಾಫಲ್ಯ ಎಂದು ನಿರೂಪಿಸಲಾಗಿದೆ.ʻಕುರುಕಾರ್ಯಂ ಯಥಾಗತಮ್ʻ ಎಂಬುದೇ ಯೋಗವಾಸಿಷ್ಠದ ಸಂದೇಶವಾಗಿದೆ.
ಆತನ ಆಂತರಂಗಿಕ ಪ್ರಯಾಣದ ವಿವರಗಳನ್ನು ಒಳಗೊಂಡಿದಗಕಥೆ,ಅಸ್ತಿತ್ವದಲ್ಲಿಲ್ಲದ ಮೂವರು ರಾಜಕುಮಾರರ ಕಥೆ ಇವು ಮೊದಲ ಮೂರು ಭಾಗಗಳಲ್ಲಿವೆ.ನಾಲ್ಕನೇ ಭಾಗದಲ್ಲಿ ಶುಕ್ರ,ದಮ,ವ್ಯಾಲ,ಕಟ,ಭೀಮ,ಭಾಸ ಹಾಗೂ ದೃಧ,ದಸುರ,ಕಾಕ ಎಂದು ಐದು ಕಥೆಗಳನ್ನು ಒಳಗೊಂಡಿದೆ.ಐದನೇ ಭಾಗದಲ್ಲಿ ಜನಕರಾಜ,ಪುಣ್ಯ ಮತ್ತು ಪಾವನ, ಬಲಿಚಕ್ರವರ್ತಿ, ಪ್ರಹ್ಲಾದ, ಗಾಧಿರಾಜ, ಉದ್ದಾಲಕ,ಸುರಘು,ಭಾಸಮತ್ತು ವಿಲಾಸ,ವಟಹವ್ಯ ಎಂದು ಒಂಬತ್ತು ಕಥೆಗಳಿವೆ.ಕಡೆಯದಾದ ಆರನೇ ಭಾಗದಲ್ಲಿ ಬ್ರಹ್ಮನ ವ್ಯಾಖ್ಯಾನ,ಭುಶುಂಡ, ಭಗವಂತನ ವರ್ಣನೆ,ದೇವಪೂಜಾ, ಮರಸೇಬಿನ ಕಥೆ, ಬಂಡೆಯ ಕಥೆ , ಅರ್ಜುನ,ಶತರುದ್ರ,ಭಗೀರಥ,ಶಿಖಿಧ್ವಜ ಮತ್ತು ಕುಡಾಲ,ತತ್ತ್ವಜ್ಞಾನಿಯ ಕಲ್ಲು,ಮೂರ್ಖ ಆನೆ,ಕಾಕನ ಕಥೆ,ಮೋಸಕ್ಕೊಳಗಾದ ಮನುಷ್ಯ,ವಿಪಶ್ಶಿತ,ಬೇಟೆಗಾರ ಮತ್ತು ಋಷಿ,ಬಂಡೆಯೊಳಗಿನ ಪ್ರಪಂಚ,ವಿಶ್ವದಾಚೆಯ ಋಷಿ,ಭೃಂಗೀಶ,ಇಕ್ಷ್ವಾಕು,ಬೇಟೆಗಾರ ಮತ್ತು ಜಿಂಕೆ,ಯೋಗದ ಏಳು ಸ್ಥಿತಿಗಳು ಎಂದು ಇಪ್ಪತ್ತಮೂರು ಕಥೆಗಳನ್ನು ಹೊಂದಿದೆ.
ರಾಮಾಯಣವು ಶ್ರೀರಾಮನ ಭೌತಿಕ ಪ್ರಪಂಚದ ಪ್ರಯಾಣದ ಕಥೆಯನ್ನು ಒಳಗೊಂಡಿದ್ದರೆ,ಯೋಗವಾಸಿಷ್ಠವು ಆತನ ಆಂತರಂಗಿಕ ಪ್ರಯಾಣದ ವಿವರಗಳನ್ನು ಒಳಗೊಂಡಿದ್ದು ವಸಿಷ್ಠ ಮಹರ್ಷಿಗಳು ತಮ್ಮ ಬೋಧನೆಯಿಂದ ಅವನಲ್ಲಿ ಜ್ಞಾನದ ಜ್ಯೋತಿಯನ್ನು ಪ್ರಕಾಶಿಸಿದರೆಂಬುದನ್ನು ತಿಳಿಸುತ್ತದೆ.ಇದರಲ್ಲಿನ ಕೆಲವು ಕಥೆಗಳು ಅರ್ಥ ಮಾಡಿಕೊಳ್ಳಲು ಅತಿ ಸುಲಭವಾಗಿದ್ದರೆ ಮತ್ತೆ ಕೆಲವು ಅತ್ಯಂತ ಗೂಢಾರ್ಥವನ್ನು ಹೊಂದಿದ್ದು ಕಬ್ಬಿಣದ ಕಡಲೆಯಂತಿವೆ.ಒಟ್ಟಾರೆ ಆತ್ಮಸಂಸ್ಕಾರವನ್ನು ಹೊಂದುವವರೆಗೂ ಸಂಸಾರಸಾಗರವನ್ನು ದಾಟುವುದು ಅಸಾಧ್ಯವೆಂಬ ಸತ್ಯವನ್ನು ಎಲ್ಲವೂ ಸ್ಪಷ್ಟಪಡಿಸುತ್ತವೆ.
- ನಂ.ನಾಗಲಕ್ಷ್ಮಿ (ನೀವು ಈ ವ್ಯಕ್ತಿಯನ್ನು charusheele@gmail.com ಇಮೇಲ್ ಮೂಲಕ ಸಂಪರ್ಕಿಸಬಹುದು)