(ಇದು ಮಹಾಭಾರತದ ಅನುಶಾಸನ ಪರ್ವದಲ್ಲಿ ಬಂದಿದೆ.)
ಪೂರ್ವಕಾಲದಲ್ಲಿ ವ್ಯಾಘ್ರಪಾದನೆಂಬ ಒಬ್ಬ ಋಷಿಗೆ ʻಉಪಮನ್ಯುʻಎಂಬ ಮಗನಿದ್ದನು.ಅವನು ಒಂದುಸಲ ತನ್ನ ಜೊತೆಗಾರರಾದ ಇತರ ಮುನಿಬಾಲಕರೊಡನೆ ತಾಯಿಯ ಬಳಿಗೆ ಬಂದು, ʻಅಮ್ಮಾ,ನನಗೆ ಹಾಲು ಕೊಡು,ಕುಡಿಯಲು ಆಸೆಯಾಗುತ್ತಿದೆʻ ಎಂದು ಪೀಡಿಸಿದನು.ಆದರೆ ಆ ಋಷಿದಂಪತಿಗಳು ಕಡುಬಡವರಾಗಿದ್ದರು.ಹಾಲಿಗೂ ಗತಿಯಿರಲಿಲ್ಲ. ಆದರೆ ಹುಡುಗರಿಗೆ ಸಹಜವಾದ ರೀತಿಯಲ್ಲಿ ಉಪಮನ್ಯು ಹಠ ಹಿಡಿದು ಅಳುವುದಕ್ಕೇ ಪ್ರಾರಂಭಿಸಿದನು.ಆಗ,ಅವನ ತಾಯಿಯು ಉಪಾಯದಿಂದ ಅಕ್ಕಿಹಿಟ್ಟನ್ನು ನೀರಿನೊಂದಿಗೆ ಬೆರೆಸಿ,ಆ ಬಿಳಿಯ ನೀರನ್ನೇ ಹಾಲೆಂದು ಹೇಳಿ ಮಗನಿಗೆ ಕೊಟ್ಟಳು.ಮಗನೂ ಅದನ್ನೇ ಹಾಲೆಂದು ಕುಡಿದು ತೃಪ್ತಿಪಟ್ಟುಕೊಂಡು ಅಳುವುದನ್ನು ನಿಲ್ಲಿಸಿದನು.ಅಂದಿನಿಂದ ಆಗಾಗ ಅವನು ಬಂದು ಕೇಳಿದಾಗಲೆಲ್ಲಾ ತಾಯಿಯು ಹಾಲಿಗೆ ಬದಲಾಗಿ ಅಕ್ಕಿಹಿಟ್ಟಿನ ನೀರನ್ನೇ ಕೊಡುತ್ತಿದ್ದಳು.ಆದರೆ,ಒಂದೊಂದು ಸಲ ಅದೂ ಇಲ್ಲವಾಗುತ್ತಿತ್ತು.
ಒಂದುದಿನ,ತಂದೆಯಾವನು ʼ,ಮಗನೂ ತಮ್ಮ ಬಂಧುಗಳು ಮಾಡುತ್ತಿದ್ದ ಯಜ್ಞವನ್ನು ನೋಡುವುದಕ್ಕಾಗಿ ಅವರ ಆಶ್ರಮಕ್ಕೆ ಹೋದರು.ಅಲ್ಲಿ ಸಾಕ್ಷಾತ್ತಾಗಿಯೇ ಕಾಮಧೇನುವು ಹಾಲನ್ನು ಕರೆಯುತ್ತಿತ್ತು.ಉಪಮನ್ಯುವೂ ಆ ಹಾಲನ್ನು ಕುಡಿದು ಅದರ ಮಧುರವಾದ ರುಚಿಯನ್ನು ತಿಳಿದುಕೊಂಡನು.
ತಂದೆ ಮಗ ತಮ್ಮ ಆಶ್ರಮಕ್ಕೆ ಹಿಂತಿರುಗಿದರು.ಉಪಮನ್ಯು ತಾಯಿಯೊಂದಿಗೆ ʻಅಮ್ಮಾ,ನೀನು ನನಗೆ ಕುಡಿಯಲಿಕ್ಕೆ ಕೊಡುತ್ತಿರುವುದು ನಿಜವಾಗಿಯೂ ಹಾಲಲ್ಲ.ನನಗೆ ಮೋಸ ಮಾಡುತ್ತಿದ್ದೀಯೆ.ನನಗೆ ನಿಜವಾದ ಹಾಲನ್ನು ಕೊಡುʻಎಂದು ಬಹಳವಾಗಿ ಪೀಡಿಸತೊಡಗಿದನು.ಆಗ ತಾಯಿಯು ದುಃಖದಿಂದ ʻಅಪ್ಪಾ,ನಾವು ಬಡವರು,ನಮಗೆ ಹಾಲೆಲ್ಲಿ ಬರಬೇಕು?ಹಠ ಮಾಡಬೇಡʻಎಂದು ಹೇಳುತ್ತ ಸಮಾಧಾನ ಮಾಡಲು ಪ್ರಯತ್ನಿಸಿದಳು.ಆದರೆ ಉಪಮನ್ಯುವಿಗೆ ಸಮಾಧಾನವಾಗಲಿಲ್ಲ ಅವನು “ಅಮ್ಮಾ,ಹಾಲು ಸಿಕ್ಕುವುದು ಹೇಗೆ?ಅದಕ್ಕಾಗಿ ನಾನೇನು ಪ್ರಯತ್ನಪಡಬೇಕು?”ಎಂದು ಕೇಳಿದನು.ಆಗ ಅವನ ತಾಯಿಯು ಮಗನಿಗೆ ಭಗವಂತನ ಅಪಾರವಾದ ಮಹಿಮೆಯ ಬಗೆಗೆ ವಿವರಿಸಿ,ಅವನನ್ನು ಕುರಿತು ತಪಸ್ಸು ಮಾಡಿ,ಒಲಿಸಿಕೊಂಡರೆ ಆಗ ದುರ್ಲಭವಾದುದು ಒಂದೂ ಇರುವುದಿಲ್ಲವೆಂದು ತಿಳಿಸಿದಳು.ಒಮ್ಮೆ ಅವನ ಅನುಗ್ರಹ ದೊರಕಿಸಿಕೊಂಡರೆ ಆ ಕರುಣಾಮಯಿಯು ಏನನ್ನಾದರೂ ಭಕ್ತರಿಗೆ ನೀಡುತ್ತಾನೆಂದೂ ಹೇಳಿದಳು.
ಉಪಮನ್ಯುವು ತಡಮಾಡದೆ ತಾಯಿತಂದೆಯರ ಅನುಮತಿಯನ್ನು ಪಡೆದು,ದೃಢಸಂಕಲ್ಪದೊಂದಿಗೆ ಒಂದು ತಪೋವನಕ್ಕೆ ಹೋಗಿ,ತಪಸ್ಸು ಮಾಡಲು ಕುಳಿತನು.ಅವನ ಮುಗ್ಧ, ಹಾಗೂ ನಿಷ್ಠೆಯಿಂದ ಕೂಡಿದ ತಪಸ್ಸಿಗೆ ಮೆಚ್ಚಿದ ಪರಮೇಶ್ವರನು ನಿಜ ರೂಪದಲ್ಲಿ ಕಾಣಿಸಿಕೊಳ್ಳದೆ, ನಾನಾ ರೂಪಗಳಲ್ಲಿ ಕಾಣಿಸಿಕೊಳ್ಳುತ್ತಾ ,ʻಮಗೂ,ನಿನಗೇನು ಬೇಕು?ʻಎಂದು ಕೇಳಿದನು.ಆದರೆ ಉಪಮನ್ಯುವು ಅದಾವುದಕ್ಕೂ ಚಂಚಲಗೊಳ್ಳದೆ,ತೃಪ್ತನೂ ಆಗದೆ,ಪರಮೇಶ್ವರನನ್ನು ಕುರಿತು ತಪಸ್ಸು ಮಾಡುತ್ತಲೇ ಇದ್ದನು. ಅವನ ಸಾಕ್ಷಾತ್ ದರ್ಶನ ಮಾಡಲೇಬೇಕೆಂಬುದು ಆ ಬಾಲಕನ ದೃಢಸಂಕಲ್ಪವಾಗಿತ್ತು.ಕಡೆಗೆ ಅವನ ದೃಢಚಿತ್ತವನ್ನು ಅರಿತ ಪರಶಿವನು ತನ್ನ ನಿಜರೂಪದಿಂದಲೇ ದರ್ಶನ ನೀಡಿ ಏನು ಬೇಕೆಂದು ಕೇಳಿದನು.ಆಗ ಉಪಮನ್ಯುವು ಸಹಸ್ರನಾಮಗಳಿಂದ ಶಿವನನ್ನು ಸ್ತುತಿಸುತ್ತ, ʻಮಹಾಪ್ರಭುವೇ, ಸರ್ವಾಂತರ್ಯಾಮಿಯೂ, ಸರ್ವೇಶ್ವರನೂ ಆದ ನಿನಗೆ ತಿಳಿಯದುದು ಏನಿರುವುದು? ನಿನ್ನಸಾಕ್ಷಾತ್ ದರ್ಶನವೇ ಆಗಿರುವಾಗ ಬೇರೆ ನನಗಿನ್ನಾವ ಫಲವು ಬೇಕಾಗಿದೆ?ನಾನು ಧನ್ಯನಾದೆ~ ಎಂದು ಹೇಳಿ ಮೌನವಾದನು. ಆದರೆ ಅವನು ತಪಸ್ಸು ಮಾಡಲು ಕಾರಣವನ್ನು ತಿಳಿದಿದ್ದ ಪರಶಿವನು ʻಮಗು,ನೀನು ಹೋದಕಡೆಯೆಲ್ಲಾ ಕ್ಷೀರಸಮುದ್ರವೇ ಸದಾ ಸನ್ನಿಹಿತವಾಗಿರಲಿʻಎಂದು ಅನುಗ್ರಹಿಸಿದನು.
ನಿರ್ಮಲ ಮನಸ್ಸಿನ ಭಕ್ತರ ಕೋರಿಕೆಯನ್ನು ಭಗವಂತನು ತಪ್ಪದೇ ಈಡೇರಿಸುವನೆಂಬುದಕ್ಕೆ ಬಾಲಕ ಉಪಮನ್ಯುವಿನ ಈ ಕಥೆಯು ಒಂದು ನಿದರ್ಶನವಾಗಿದೆ..