ಒಂದಾನೊಂದು ಕಾಲದಲ್ಲಿ ಒಬ್ಬ ಯೋಗ ಭಿಕ್ಷುವಿದ್ದನು. ಅವನು ಸಾಮಾನ್ಯರಂತಲ್ಲದೆ ವೈರಾಗ್ಯವೇ ಆದಿಯಾಗಿ ಮನಸ್ಸಿನಲ್ಲಿ ಬೌದ್ಧಿಕ ಪಕ್ವತೆಯನ್ನು ಹೊಂದಿದ್ದು ಸದಾಕಾಲ ಸಮಾಧಿ ಸ್ಥಿತಿಯಲ್ಲಿದ್ದು ಧ್ಯಾನವನ್ನು ಮಾಡುತ್ತಾ ಕಾಲ ಕಳೆಯುತ್ತಿದ್ದನು. ವಿಷಯ ಸುಖಗಳಿಂದ ದೂರವಾಗಿಯೇ ಇದ್ದನು. ಹೀಗೇ ಬಹುಕಾಲ ಕಳೆಯಿತು.
ಒಮ್ಮೆ ಆ ಭಿಕ್ಷುಕ ಸಮಾಧಿಯಿಂದ ಎಚ್ಚೆತ್ತು ಏಕಾಗ್ರ ಮನಸ್ಕನಾಗಿ ಕುಳಿತು ಮುಂದೇನು ಮಾಡಬೇಕೆಂದು ಯೋಚಿಸತೊಡಗಿದ್ದನು.“ಬಹಳ ಕಾಲ ನಾನು ಲೌಕಿಕದಲ್ಲಿ ಮುಳುಗದೆ ಸನ್ಯಾಸಿಯಂತೆ ವೈರಾಗ್ಯ ಮನೋಭಾವದಿಂದ ಧ್ಯಾನಸ್ಥನಾಗಿಯೇ ಕಾಲ ಕಳೆದಿರುವೆ. ಈ ಲೀಲಾರ್ಥವಾಗಿ ಸಾಮಾನ್ಯ ಜನರಂತೆ ಎಷ್ಟು ಕಾಲ ಇರುತ್ತೇನೆ? ಎಂದು ಯೋಚಿಸಿ ಒಂದು ನಿರ್ಧಾರಕ್ಕೆ ಬಂದನು. ಹೀಗೆ ನಿರ್ಧರಿಸುತ್ತಿದ್ದಂತೆಯೇ ಒಂದು ವ್ಯಾಪಾರವನ್ನು ಮಾಡಲು ತೀರ್ಮಾನ ಮಾಡಿಕೊಂಡು ಆರಂಭಿಸಿಯೇ ಬಿಟ್ಟನು. ಅವನ ಚೇತನವು ಈ ರೀತಿ ಲೌಕಿಕ ಪ್ರಪಂಚದ ಚಟುವಟಿಕೆಗಳಲ್ಲಿ ಲೀನವಾಗಿ ಹೋಯಿತು. ಅವನ ಮನಸ್ಸು ಈ ಹೊಸದಾದ ಸಂಕಲ್ಪದೊಂದಿಗೆ ಸಾಮಾನ್ಯ ಮಾನವನ ರೂಪವನ್ನು ತಳೆಯಿತು. ತನ್ನ ಹೊಸ ಚಟುವಟಿಕೆಗೆ ಹೊಂದುವಂತೆ ಒಂದು ಹೆಸರು ಬೇಕೆಂದು ಯೋಚಿಸಿ ಕಾಕತಾಳೀಯವಾಗಿ “ಜೀವಟ” ಎಂದು ಕರೆದುಕೊಂಡನು. ಅಂದರೆ ಆ ಹೊಸ ವ್ಯಕ್ತಿತ್ವವು ಅವನದೇ ಆದ ಮನಸ್ಸಿನ ಅಪೇಕ್ಷೆಯಂತೆ ರೂಪಿತಗೊಂಡಿದ್ದರಿಂದ ಒಂದು ಸ್ವಪ್ನದಲ್ಲಿ ನಡೆಯುವಂತಹ ಒಂದು ಕಾಲ್ಪನಿಕ ಘಟನೆ ಮಾತ್ರವೇ ಆಗಿತ್ತು.
ಈ ಜೀವನವೆಂಬ ಸ್ವಪ್ನ ಪುರುಷನು ಒಂದು ಸ್ವಪ್ನ ನಿರ್ಮಿತವಾದ ನಗರದಲ್ಲಿನ ರಸ್ತೆಗಳಲ್ಲಿ ಬಹುಕಾಲ ವ್ಯಾಪಾರ ಮಾಡುತ್ತಿದ್ದನು. ಬಹಳ ಕಾಲ ಸಂತೋಷವಾಗಿ ಕಾಲ ಕಳೆಯಿತ್ತಾ ಒಮ್ಮೆ ನಿದ್ರೆಯಲ್ಲಿ ಮುಳುಗಿದ್ದಾಗ ಕನಸಿನಲ್ಲಿ ತಾನು ಒಬ್ಬ ವಿಪ್ರನಾಗಿರುವಂತೆ ಕಂಡನು. ಕನಸಿನ ಆ ವಿಪ್ರನು ಹಗಲಿನಲ್ಲೆಲ್ಲಾ ದುಡಿದು ಅಯಾಸದಿಂದ ಮಲಗಿದ್ದಾಗ ತನಗೆ ಒಂದು ಸಾಮಂತ ಪದವಿ ಬಂದಂತೆ ಕನಸು ಕಂಡನು. ಆ ಸಾಮಂತನು ಒಮ್ಮೆ ಊಟ ಮಾಡಿ ಮಲಗಿದ್ದಾಗ ತಾನು ಭೂಮಂಡಲಕ್ಕೆಲ್ಲ ರಾಜನಾದಂತೆ ಕನಸು ಕಂಡನು. ಆ ರಾಜ ಪದವಿಯು ಸಕಲ ಭೋಗ ಭಾಗ್ಯಗಳಿಂದ ಕೂಡಿತ್ತು. ಆವೆಲ್ಲದರ ಅತಿಯಾದ ಸೌಖ್ಯದಿಂದ ಬಳಲಿದ ರಾಜನು ಒಮ್ಮೆ ನಿದ್ರೆಯಲ್ಲಿ ತಾನೊಬ್ಬಳು ಸುಂದರಿಯಾದ ಸ್ರೀಯಾದಂತೆ ಕನಸು ಕಂಡನು. ಆ ಸ್ರ್ರೀ ಒಮ್ಮೆ ಗಾಡನಿದ್ರೆಯಲ್ಲಿ ಮುಳುಗಿದಾಗ ಕನಸಿನಲ್ಲಿ ತಾನೊಂದು ಚಪನಯನೆಯಾದ ಮೃಗಿ {ಹೆಣ್ಣು ಜಿಂಕೆ}{ ಯಾದಂತೆ ಕಂಡಳು. ಆ ಮೃಗಿಯೂ ನಿದ್ರಿಸಿದ್ದಾಗ ಒಮ್ಮೆ ತಾನೊಂದು ಬಳ್ಳಿಯಾದಂತೆ ಕನಸು ಕಂಡಿತು. ಚಿತ್ತವೆಂಬುದು ತಿರ್ಯಗ್ಜಾತಿಗಳಿಗೂ ಇರುವುದರಿಂದಲೂ ಆ ಚಿತ್ತಕ್ಕೆ ಕನಸು ಕಾಣುವುದೇ ಅಭ್ಯಾಸವಾಗಿರುವುದರಿಂದಲೂ ಮತ್ತೆ ಆ ಕನಸಿನ ಪ್ರಕ್ರಿಯೆ ಮುಂದುವರಿದೇ ಇತ್ತು. ಬಳ್ಳಿಯು ಚಿಗುರು, ಹೂವು, ಹಣ್ಣುಗಳಿಂದ ಕೂಡಿ ಮನೋಹರವಾದ ವನದೇವತೆಯ ಉದ್ಯಾನದಲ್ಲಿನ ಲತಾಗೃಹಕ್ಕೆ ಭೂಷಣವಾಗಿತ್ತು. ಅದೂ ಒಮ್ಮೆ ಕನಸಿನಲ್ಲಿ ತಾನೊಂದು ಭ್ರಮರವಾದಂತೆ ಕಂಡಿತು. ಆ ಭ್ರಮರವು ಉದ್ಯಾನವನದ ಲತೆಗಳಲ್ಲಿಯೂ, ತಾವರೆ ಮುಂತಾದ ಪುಷ್ಪಗಳಲ್ಲಿಯೂ ವಿಹರಿಸುತ್ತಾ ಮಕರಂದ ಹೀರುತ್ತಾ ಆನಂದವಾಗಿತ್ತು.
ಒಮ್ಮೆ ಆ ಭ್ರಮರವು ಒಂದು ಕಮಲದಲ್ಲಿ ಮಕರಂದವನ್ನು ಹೀರುತ್ತ ಹೀರುತ್ತ ಅದರ ಬಿಸನಾಳದವರೆಗೂ ಕೊರೆದುಕೊಂಡು ಹೋಯಿತು. ಆ ಸಮಯದಲ್ಲಿ ಬಿಸನಾಳವನ್ನು ಕಿತ್ತು ಹಾಕಲು ಒಂದು ಆನೆಯು ಅದನ್ನು ಧ್ವಂಸ ಮಾಡಿದಾಗ ಜೊತೆಯಲ್ಲಿಯೇ ಇದ್ದ ಭ್ರಮರವೂ ಸತ್ತುಹೋಯಿತು. ಹಾಗೆ ಸಾಯುವಾಗ ಆನೆಯನ್ನು ಕಂಡು ಅದರ ಬಲವನ್ನೇ ಕುರಿತು ಯೋಚಿಸುತ್ತಿರುದ್ದುದರಿಂದ ಅದು ಒಂದು ಮದ್ದಾನೆಯಾಗಿ ಹುಟ್ಟಿತು. ಆ ಮದ್ದಾನೆಯೇ ಕಾಡಿನ ಎಲ್ಲ ಕಡೆ ಅಲೆದಾಡುತ್ತಾ ಒಮ್ಮೆ ಒಂದು ದೊಡ್ಡ ಹಳ್ಳದಲ್ಲಿ ಬಿದ್ದುಹೋಯಿತು. ಅದೃಷ್ಟವಶಾತ್ ಅತ್ತ ಕಡೆಗೆ ಬಂದ ಒಬ್ಬ ರಾಜನ ದಯೆಯಿಂದ ಮೇಲೆ ಬರುವಂತಾಗಿ ಅದು ಅವನ ಅತಿ ಪ್ರಿಯವಾದ ಪ್ರಾಣಿಯಾಗಿ ಮಹಾಬಲಂತಕ ಎಂಬ ಹೆಸರಿನಿಂದ ಪ್ರಸಿದ್ದಿ ಹೊಂದಿ ತನ್ನ ಶಕ್ತಿಯಿಂದ ಮೆರೆಯತೊಡಗಿತು.
ಒಮ್ಮೆ ಆ ರಾಜನು ಶತ್ರುಗಳೊಡನೆ ಯುದ್ಧದಲ್ಲಿ ತೊಡಗಿದ್ದಾಗ ಅವನ ಜೊತೆಗಿದ್ದ ಆ ಆನೆಯು ಶತ್ರುಗಳ ಕೈಗೆ ಸಿಕ್ಕಿ ಮರಣ ಹೊಂದಿತು. ಸಾಯುವ ಸಮಯದಲ್ಲಿ ಮದ್ದಾನೆಗಳ ಕುಂಭಸ್ಥಳದಲ್ಲಿ ಆಡುತ್ತಿದ್ದ ದುಂಬಿಗಳನ್ನು ನೆನೆಯುತ್ತ ನೆನೆಯುತ್ತ ಅದು ಮತ್ತೆ ದುಂಬಿಯಾಗಿ ಜನಿಸಿತು. ಆ ದುಂಬಿಯು ವನಲತೆಗಳಲ್ಲಿ ಸುತ್ತಾಡುತ್ತ ಮತ್ತೆ ಕಮಲದ ಬಳಿಗೆ ಬಂದಿತು. ಅಲ್ಲಿ ಮತ್ತೊಮ್ಮೆ ಅದೇ ಬಗೆಯ ಘಟನೆ ಪುನರಾವರ್ತಿಸಿ ಆನೆಯೊಂದರೆ ಕಾಲಿಗೆ ಸಿಕ್ಕಿ ಸಾಯುವಾಗ ಮಗ್ಗುಲಲ್ಲಿದ್ದ ಹಂಸವೊಂದನ್ನು ನೋಡಿ ಅದರ ಅಕರ್ಷಣೆ ಹೊಂದಿ ತಾನೊಂದು ರಾಜಹಂಸವಾಗಿ ಹುಟ್ಟಿತು. ಆ ರಾಜಹಂಸವು ತನ್ನ ಕುಲಬಾಂಧವರೊಡನೆ ವಿಹರಿಸುತ್ತ ತಾನೂ ಹಂಸವೆಂಬ ರೂಪವನ್ನು ಹೊಂದಿದ್ದರಿಂದ ಬ್ರಹ್ಮನ ಹಂಸಗಳ ಕಥೆಯನ್ನು ಕೇಳಿದ್ದರಿಂದ ಅದರ ಮನಸ್ಸಿನಲ್ಲಿ ತಾನೂ ಬ್ರಹ್ಮಹಂಸವಾಗಬೇಕೇಂದು ಆಸೆಯು ಬೆಳೆಯಿತು. ಅದನ್ನೇ ಕುರಿತು ಚಿಂತಿಸುತ್ತ ಒಮ್ಮೆ ಯಾವುದೋ ವ್ಯಾಧಿಯ ಕಾರಣದಿಂದ ಸತ್ತು ಬ್ರಹ್ಮಹಂಸವೇ ಆಗಿ ಜನಿಸಿತು. ಆ ಹಂಸವು ಬ್ರಹ್ಮನ ಜೊತೆಯಲ್ಲಿಯೇ ಇರುತ್ಗಿದ್ದು ಒಮ್ಮೆ ತನ್ನೊಡೆಯನ ಜೊತೆಯಲ್ಲಿ ರುದ್ರನ ಪುರಕ್ಕೆ ಹೋಗಿ ಅಲ್ಲಿ ರುದ್ರನರ್ತನವನ್ನು ಮಾಡಿತು. ಆಗ ಅದಕ್ಕೆ ತಾನೂ ರುದ್ರನೇ ಆಗಬೇಕೆಂದು ಆಸೆಯಾಗಿಬಟ್ಟಿತು. ಬ್ರಹ್ಮಲೋಕದಲ್ಲಿ ಸತತವಾಗಿ ಪಡೆದ ಜ್ಞಾನದಿಂದ ವಿಶೇಷ ಮಹತ್ವವನ್ನು ಪಡೆದುಕೊಂಡಿದ್ದು ಆ ಹಂಸವು ರುದ್ರದೇವನ್ನು ಧರಿಸಲು ತನ್ನ ದೇವನ್ನು ಬಿಟ್ಟುಬಿಟ್ಟಿತು. ಈಗ ಅದು ರುದ್ರದೇಹವಾಯಿತು.
ಆ ರುದ್ರನು ರುದ್ರಮಂದಿರದಲ್ಲಿ ಗಣಕೋಟಿಗಳೊಂದಿಗೆ ಅಲ್ಲಿನ ಆಚಾರಗಳಲ್ಲಿ ತೊಡಗಿ ಕಾಲ ಕಳೆಯುತ್ತಿದ್ದನು. ರುದ್ರಹಂಸ ಸಾಮಾನ್ಯದಿಂದ ಅತ್ಯಂತ ಉನ್ನತಸ್ತರದ ಜ್ಞಾನವನ್ನು ಹೊಂದಿದ ಫಲವಾಗಿ ಅವನಿಗೆ ತನ್ನ ಹಿಂದಿನ ವೃತ್ತಾಂತವೆಲ್ಲವೂ ಗೋಚರಿಸತೊಡಗಿತು. ಅಜ್ಞಾನದಿಂದ ಸಂಪೂರ್ಣ ಮುಕ್ತನಾಗಿದ್ದ ಆ ರೂಪದಲ್ಲಿ ತನ್ನೊಳಗೆ ತಾನೇ ತನ್ನ ನೂರಾರು ಕನಸುಗಳಿಗಾಗಿ ಆಶ್ಷರ್ಯ ಪಡುತ್ತಾ ಹೀಗೆಂದು ಚಿಂತಿಸಿದನು “ಈ ಮಾಯೆಯು ಎಷ್ಟು ವಿಚಿತ್ರವಾದುದು. ಇದು ವಿಶ್ವವನ್ನೇ ಮೋಹಗೋಳಿಸುತ್ತದಲ್ಲವೆ? ಇದೆಲ್ಲ ಮರುಭೂಮಿಯಲ್ಲಿ ನೀರು ಕಾಣುವ ನೀರಿನಂತೆ ಅಸತ್ಯವೇ ಆಗಿದ್ದರೂ ಸತ್ಯವಾಗಿಯೇ ಇರುವಂತೆ ತೋರುವುದಲ್ಲವೇ? ನಾನು ಭಿಕ್ಷುನಾಗಿದ್ದಾಗ ಹಠಯೋಗ ಆಭ್ಯಾಸದಿಂದ ದೇಹವನ್ನು ಬಂಧಿಸಿ, ಖಂಡಿಸಿ, ಉಪಾಸನಾದಿಗಳಿಂದ ದೊರೆಯುವ ದೇವದರ್ಶನಾದಿಗಳನ್ನು ಕಂಡು ಅದರಲ್ಲಿಯೇ ಆನಂದ ಹೊಂದಿ ಸುಖವಾಗಿದ್ದೆನು.
ಮಾನಸ ಪೂಜೆಯಲ್ಲಿಯೇ ಮಗ್ಮನಾಗಿದ್ದೆನು. ಆದರೆ ಒಂದು ಆಸೆಗೆ ಪಕ್ಕಾಗಿ ಜೀವಟನಾದ ಕೂಡಲೇ ಅನೇಕ ಹಂತಗಳಲ್ಲಿ ಸುತ್ತತೊಡಗಿದೆನು. ಜೀವಟನಾಗಿದ್ದವನು ಬ್ರಾಹ್ಮಣರಲ್ಲಿ ವಿಶ್ವಾಸವನ್ನು ಹೊಂದಿದ್ದರಿಂದ ಬ್ರಾಹ್ಮಣನೇ ಆದೆನು. ಆ ಬ್ರಾಹ್ಮಣನಾಗಿರುವಾಗಲೂ ಅಧಿಕಾರವುಳ್ಳ ಸಾಮಂತ ರಾಜರನ್ನು ಚಿಂತಿಸುತ್ತಿದ್ದುರಿಂದ ಸಾಮಂತ ರಾಜನಾದೆನು. ಹೀಗೆ ಮುಂದೆ ಆಸೆಗಳು ಹೊಸದಾಗಿ ಉಂಟಾದ ಹಾಗ ನರಪತಿಯಾಗಿ ಅವನು ಕಾಮುಕನಾದುದರಿಂದ ದಿವ್ಯ ಸ್ತ್ರೀಯಾಗಿ, ಆ ನಂತರ ಆಕೆ ಸದಾ ಭೋಗಾಸಕ್ತಿಗಳಾಗಿ ಹರಿಣಗಳ ಕಣ್ಣುಗಳಲ್ಲಿ ಆಸಕ್ತಿ ಹೊಂದಿ ಮತ್ತು ಚಂಚಲಚಿತ್ತೆಯಾಗಿದ್ದುದರ ಕಾರಣ ಹರಿಣಿಯ ಜನ್ಮ ಪ್ರಾಪ್ತವಾಯಿತು. ಮುಂದೆ ಲತೆಯಾಗಿ. ಭ್ರಮರವಾಗಿ, ಆನೆಯಾಗಿ, ಪದೇ ಪದೇ ಸಂಸಾರವೆಂಬ ಮಹಾಸಾಗರದಲ್ಲಿ ಸಿಲುಕಬೇಕಾಯಿತು. ಇದೆಲ್ಲ ಮನಸ್ಸು ಮಾಡುವ ಭ್ರಾಂತಿಗಳ ರೂಪವೇ ಆಗಿದೆ. ಅದರ ಫಲವಾಗಿಯೇ ನಾನು ಹಲವಾರು ಜನ್ಮಗಳನ್ನೆತ್ತಿ {ಮಾನಸಿಕವಾಗಿ} ಈಗ ರುದ್ರನಾಗಿದ್ದೇನೆ. ಭಿಕ್ಷುಕನಾಗಿ, ತತ್ತ್ವಜ್ಞಾನಿಯಾಗಿ ಸಂಪಾದಿಸಿದ್ದ ಯೋಗ್ಯತೆಯಿಂದಲೇ ಈ ಎಷ್ಟೆಷ್ಟೋ ವಿಘ್ನಗಳು ಅಡ್ಡಿ ಬಂದರೂ ದಾಟಿಸಿ ಮತ್ತೆ ತನ್ನ ಕಡೆಯೇ ಆ ಪರಮಾತ್ಮನು ಎಳೆದುಕೊಂಡು ಬಂದಿದ್ದಾನೆ” ಎಂದು ಯೋಚಿಸಿದನು.
ಹೀಗೆ ಅವನ ಮನಸ್ಸು ಜ್ಞಾನವನ್ನು ಪಡೆದುಕೊಂಡು ಸರ್ವಜ್ಞತ್ವವನ್ನು ಸಿದ್ಧಿಸಿಕೊಂಡಿದ್ದರಿಂದ ಮುಂದೆ ರುದ್ರನ ಅನುಗ್ರಹದಿಂದ ರುದ್ರಗಣಗಳಲ್ಲಿ ಒಬ್ಬನಾಗಿ ಹೋದನು.
ಭಿಕ್ಷುವಿಗೆ ಶ್ರೇಷ್ಟವಾದ ಅಭ್ಯಾಸವೂ, ಯೋಗವೂ ಇದ್ದುದರಿಂದಲೇ ಅವನ ಸಂಕಲ್ಪ ಸ್ವಪ್ನಗಳು ಸಿದ್ಧಿಸಿದ್ದುವು. ಯಾರಿಗೆ ಯೋಗ, ವಿಜ್ಞಾನ ದೃಷ್ಠಿಗಳು ಸಿದ್ಧಿಯಾಗಿರುತ್ತವೆಯೋ ಅವರು ಸರ್ವವನ್ನು ಸರ್ವದೇಶಕಾಲಗಳಲ್ಲಿಯೂ ನೋಡಬಲ್ಲರು. ಏಕನಿಷ್ಠೆಯು ಇದ್ದರೆ ಮಾತ್ರ ಇದು ಸಾಧ್ಯವಾಗುತ್ತದೆ. ಒಂದು ದೃಡಸಂಕಲ್ಪವಿದ್ದವರಿಗೇ ಅವರ ಗುರಿ ಸಾಧನೆಯು ಸಿದ್ಧಿಸುತ್ತದೆ.
- ನಂ.ನಾಗಲಕ್ಷ್ಮಿ (ನೀವು ಈ ವ್ಯಕ್ತಿಯನ್ನು charusheele@gmail.com ಇಮೇಲ್ ಮೂಲಕ ಸಂಪರ್ಕಿಸಬಹುದು)