ದಕ್ಷಿಣ ಭಾರತೀಯರ ಆವಿಷ್ಕರಣೆ ಈ ಶಾವಿಗೆ ಉಪ್ಪಿಟ್ಟು. ಇದು ಆರೋಗ್ಯಕರ ಆಹಾರವಾಗಿದ್ದು ಷಡ್ರಸಗಳ ಸಮ್ಮಿಶ್ರ ಪರಿಮಳವನ್ನು ಹೊಂದಿರುತ್ತದೆ. ಶಾವಿಗೆಯು ಗೋಧಿಯಿಂದ ಮಾಡಲ್ಪಡುವ ಕಾರಣ ಅಧಿಕವಾಗಿ ನಾರಿನಂಶ, ಜೀವಸತ್ವಗಳು, ರೋಗನಿರೋಧಕಗಳು ಮತ್ತು ಖನಿಜಾಂಶಗಳನ್ನು ಹೊಂದಿದೆ. ಸಸ್ಯ ಮೂಲವಾಗಿರುವ ಉದ್ದಿನ ಬೇಳೆಯು ಹೇರಳವಾಗಿ ಸತು ಮತ್ತು ಪೊಟ್ಯಾಶಿಯಮ್ ಹೊಂದಿದ್ದು, ಬಲವರ್ಧಕವೂ ಆಗಿದೆ. ಕೊತ್ತಂಬರಿಯು ಹೆಚ್ಚಿನ ಕರಗದ ಫೈಬರ್ ಅನ್ನು ಹೊಂದಿದೆ ಮತ್ತು ವಿಟಮಿನ್ ಸಿ ಮತ್ತು ವಿಟಮಿನ್ ಕೆ ಯಲ್ಲಿ ಸಮೃದ್ಧವಾಗಿದೆ.
ಬೇಕಾಗುವ ಪದಾರ್ಥಗಳು –
ಮುರಿದ ಶಾವಿಗೆ – ೧ ಬಟ್ಟಲು
ಸಾಸಿವೆ – ೧⁄೨ ಚಮಚ
ಉದ್ದಿನ ಬೇಳೆ – ೧ ಚಮಚ
ಜೀರಿಗೆ – ೧⁄೨ ಚಮಚ
ಸಣ್ಣಗೆ ಕತ್ತರಿಸಿದ ಶುಂಠಿ – ೧⁄೨ ಚಮಚ
ಕರಿಬೇವು – ೭-೮ ಎಸಳು
ಕತ್ತರಿಸಿದ ಕೊತ್ತಂಬರಿ – ಪ್ರಮಾಣಕ್ಕೆ ಅನುಗುಣವಾಗಿ (ಸ್ವಲ್ಪ)
ಇಂಗು – ೧ ಚಿಟಿಕೆ
ತೈಲ – ೧ ಚಮಚ
ಉಪ್ಪು – ರುಚಿಗೆ ತಕ್ಕಷ್ಟು
ಮಾಡುವ ವಿಧಾನ –
ಮುರಿದುಕೊಂಡ ಶಾವಿಗೆಯನ್ನು ಬಾಣಲೆಯಲ್ಲಿ ಹೊಂಬಣ್ಣ ಬರುವವರೆಗೆ ಹುರಿಯಿರಿ.
ಬಾಣಲೆಯನ್ನು ತೆಗೆದುಕೊಂಡು, ಎಣ್ಣೆ, ಸಾಸಿವೆ, ಜೀರಿಗೆ, ಉದ್ದಿನಬೇಳೆ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ ಮತ್ತು ಉದ್ದಿನ ಬೇಳೆ ಹೊಂಬಣ್ಣಕ್ಕೆ ಬರುವ ತನಕ ಹುರಿಯಿರಿ.
ಕರಿಬೇವಿನ ಸೊಪ್ಪು, ಶುಂಠಿ, ಇಂಗು ಹಾಕಿ ಹುರಿಯಿರಿ. ತದನಂತರ ನೀರು, ಉಪ್ಪು ಸೇರಿಸಿ ಮಿಶ್ರಣವನ್ನು ಕುದಿಯಲು ಬಿಡಿ.
ನೀರು ಸರಿಯಾಗಿ ಕುದ್ದ ನಂತರ ಹುರಿದ ಶಾವಿಗೆಯನ್ನು ಸೇರಿಸಿ, ಅದು ಮೃದುವಾಗುವವರೆಗೆ ಬೇಯಿಸಿ ಮತ್ತು ಎಲ್ಲಾ ನೀರು ಇಂಗಿದ ನಂತರ, ಉರಿಯನ್ನು ಆರಿಸಿ. ಆನಂತರ ಕೊತ್ತಂಬರಿ ಸೊಪ್ಪಿನಿಂದ ಅಲಂಕರಿಸಿದ ಶಾವಿಗೆ ಉಪ್ಪಿಟ್ಟನ್ನು ಸ್ವಲ್ಪ ನಿಂಬೆಯ ರಸದೊಂದಿಗೆ ಸೇವಿಸಿ.
ಸಲಹೆಗಳು
ವಿಟಮಿನ್ ಸಿ ಅಂಶವನ್ನು ಹೆಚ್ಚಿಸಲು ಬಡಿಸುವಾಗ ಮೇಲ್ಭಾಗದಲ್ಲಿ ನಿಂಬೆಯ ರಸವನ್ನು ಹಿಂಡಿ.
ಶಾವಿಗೆಯನ್ನು ಅತಿಯಾಗಿ ಬೇಯಿಸಬೇಡಿ.
ನೀವು ಕರಿಬೇವಿನ ಎಲೆಗಳನ್ನು ಒಣಗಿಸಿ ಹುರಿದು ಪುಡಿಯನ್ನು ತಯಾರಿಸಿ ಅಡಗೆಯಲ್ಲಿ ಸೇರಿಸಬಹುದು.