ಯೋಗವಾಣಿ | kannada yogavani
English Articles, Yoga Events & Activities

ಶಾಸ್ತ್ರ, ದರ್ಶನ, ಮತ್ತು ಸಂಬಂಧ – ಯೋಗದ ಮಿತಿಯಲ್ಲಿ

ಯಾವುದೇ ಒಂದು ವಿಷಯ ಗ್ರಾಂಥಿಕ ರೂಪವನ್ನು ಪಡೆದಾಗ ಅದನ್ನು ಶಾಸ್ತ್ರ ಎಂಬುದಾಗಿ ಕರೆಯುತ್ತಾರೆ. ಅರ್ಥಾತ್ ಶಾಸ್ತ್ರಕ್ಕೆ ಒಂದು ಚೌಕಟ್ಟಿದೆ, ಅಳತೆ, ಬದ ಇವೆ. ಇವೆಲ್ಲವುಗಳನ್ನು ಹೊಂದಿದ್ದು ಶಾಸ್ತ್ರ ವಾಗುತ್ತದೆ. ಯಾವುದೇ ಗ್ರಂಥಕ್ಕೆ ಶಾಸ್ತ್ರತ್ವ ಬರುವುದು ಅಳತೆ ಗೋಲಿಗೆ ಹೊಂದಿಸಿದಾಗ. ಅಳತೆ ಮೀರಿದ್ದು ಶಾಸ್ತ್ರವಲ್ಲ.

ಅನುಬಂಧ ಚತುಷ್ಟಯ

ಶಾಸ್ತ್ರದ ಅಳತೆ ಗೋಲು ಏನು? ಪ್ರತಿಯೊಂದು ಶಾಸ್ತ್ರಕ್ಕೆ ಅನುಬಂಧ ಚತುಷ್ಟಯ ಎಂಬ ನಾಲ್ಕಂಕಿ ಸೂತ್ರ ಅನಿವಾರ್ಯ. ಈ ಸೂತ್ರ ವಿಷಯಕ್ಕೆ ಸ್ಪಷ್ಟತೆಯನ್ನು ಕೊಡುತ್ತದೆ. ಈ ನಾಲ್ಕಂಕಿ ಸೂತ್ರ ಎಂದರೆ ಏನು ಮುಂದೆ ನೋಡೋಣ.

ಅಧಿಕಾರಿ – ಗ್ರಂಥದಲ್ಲಿ ಹೇಳಿರುವ ವಿಷಯವನ್ನು ಸಂಪೂರ್ಣವಾಗಿ ಅರ್ಥಮಾಡಿಕೊಳ್ಳಲು ಸಿದ್ದನಾಗಿರುವ, ಸಾಮರ್ಥ್ಯ ಹೊಂದಿದ, ಪೂರ್ವ ಸಿದ್ಧತೆಯೊಂದಿಗೆ ಸನ್ನದ್ಧನಾಗಿರುವ ವಿಶಿಷ್ಟ ವ್ಯಕ್ತಿ, (ಸ್ಥಾನ ಮಾನವಲ್ಲ, ಇದೊಂದು ಸಿದ್ಧತೆಯ ಮಾನಸಿಕ ಸ್ಥಿತಿ.)
ವಿಷಯ – ಪ್ರಮುಖವಾಗಿ ಪ್ರಸ್ತಾವಿಸಲ್ಪಡುವ ಒಂದು ಕೇಂದ್ರ ವಿಷಯ
ಪ್ರಯೋಜನ – ವಿಷಯವನ್ನು ಅರಿತರೆ ಆಗುವ ಫಲರೂಪದ ಪ್ರಯೋಜನ
ಸಂಬಂಧ – ವಿಷಯ ಮತ್ತು ಅಭ್ಯಾಸ ಮಾಡುವ ವ್ಯಕ್ತಿ ಅಥವಾ ಪ್ರಯೋಜನ ಇವುಗಳ ಮಧ್ಯೆ ಇರುವ ಸಂಬಂಧ

ಈ ನಾಲ್ಕು ಇದ್ದಾಗ ವಿಷಯ ಪ್ರಸ್ತಾವನೆ ಸುಲಭವಾಗುತ್ತದೆ. ಪ್ರತಿಯೊಂದು ಗ್ರಂಥಕ್ಕೂ/ಶಾಸ್ತ್ರಕ್ಕೂ ನಾಲ್ಕು ಅಂಶಗಳು ಬೇರೆ ಬೇರೆಯಾಗಿರುತ್ತವೆ. ಈ ನಾಲ್ಕು ಅಂಶಗಳು ಸ್ಪಷ್ಟವಾದಾಗ ಗ್ರಂಥಕ್ಕೆ ಶಾಸ್ತ್ರ ರೂಪ ಬರುವುದು ಸಹಜ. ಇದಕ್ಕೆ ಸಮನಾಗಿ ದರ್ಶನ ಗಳು ನಮ್ಮ ಪರಂಪರೆಯಲ್ಲಿ ನಿರಂತರವಾಗಿ ಅಧ್ಯಯನ ಮಾಡಲ್ಪಡುವ ಗ್ರಂಥಗಳು.

ಶಾಸ್ತ್ರಕ್ಕೆ ಮತ್ತು ದರ್ಶನಕ್ಕೆ ಏನು ಸಂಬಂಧ ಅಥವಾ ಇವೆರಡರ ಮಧ್ಯೆ ಭೇದವಿದೆಯೇ ಎಂಬುದನ್ನು ಸ್ಥೂಲವಾಗಿ ತಿಳಿಯೋಣ. ದರ್ಶನವೆಂದರೆ ನೋಟ, ಒಂದು ಸ್ಥಾನದಿಂದ ಯಾವುದಾದರೂ ಒಂದು ವಸ್ತುವನ್ನು ನೋಡಿದಾಗ ಆ ವಸ್ತುವಿನ ಬಗ್ಗೆ ತೋರಿದ ಸಹಜ ಸತ್ಯದ ಕಾಣುವಿಕೆ. ಅದೇ ವಸ್ತುವನ್ನು ಇನ್ನೊಂದು ಸ್ಥಾನದಿಂದ ಬೇರೆ ರೀತಿಯಲ್ಲಿ ಕಾಣುವುದೂ, ಅದೇ ವಸ್ತುವನ್ನು ಮತ್ತೊಂದು ದಿಕ್ಕಿನಲ್ಲಿ ಕಂಡಾಗ ಅದು ಬೇರೆ ರೀತಿಯಲ್ಲಿ ತೋರುವುದು ಸತ್ಯವಾದದ್ದೆ. ಬೇರೆ ಬೇರೆ ಸ್ಥಾನಗಳಿಂದ ಕಂಡ ಒಂದೇ ವಸ್ತು ಬೇರೆ ರೀತಿಯಲ್ಲಿ ಗ್ರಹಿಸಿದ್ದು, ಅದು ಆ ದೃಷ್ಟಿಗೆ, ಸ್ಥಾನಕ್ಕೆ, ದಿಕ್ಕಿಗೆ ಸತ್ಯವೇ ಹೌದು. ಇದನ್ನು ಅಂಶಶಃ ಸತ್ಯ ಎಂಬುದಾಗಿ ಗ್ರಹಿಸಬಹುದು. ಈ ಮಿತಿಯನ್ನು ಮೀರಿ ಸತ್ಯದ ದರ್ಶನವಾಗಬೇಕು. ದರ್ಶನಕ್ಕಾಗಿ ಶಾಸ್ತ್ರಗಳು ಸಹಕರಿಸುತ್ತವೆ. ದರ್ಶನಕ್ಕಾಗಿ ಶಾಸ್ತ್ರ, ನೋಟಕ್ಕಾಗಿ ಕಣ್ಣು, ನೋಡುವುದಕ್ಕಾಗಿ ಒಂದು ಸ್ಥಾನ; ಹೀಗೆ ದರ್ಶನ ಮತ್ತು ಶಾಸ್ತ್ರಗಳಿಗೆ ಅವಿನಾಭಾವ ಸಂಬಂಧವಿದೆ. ಪ್ರತಿಯೊಂದು ಶಾಸ್ತ್ರಕ್ಕೆ ಒಂದು ದರ್ಶನದ ಮಾರ್ಗದರ್ಶನ ಅನಿವಾರ್ಯ. ದರ್ಶನವಿಲ್ಲದ ಶಾಸ್ತ್ರ, ರಸವಿಲ್ಲದ ಚರಟದಂತೆ ಸತ್ವ ಮತ್ತು ರುಚಿ ಎರಡು ಇರುವುದಿಲ್ಲ. ಹಾಗಾಗಿ ಇಲ್ಲಿ ಯೋಗಶಾಸ್ತ್ರ ಮತ್ತು ಯೋಗ ದರ್ಶನ ಇವುಗಳ ಒಂದು ತುಣುಕು ಇಲ್ಲಿದೆ.

ಯೋಗ ಶಾಸ್ತ್ರ ಮತ್ತು ದರ್ಶನ
ಯೋಗ ಶಾಸ್ತ್ರದ ಅಧಿಕಾರಿ – ಮನಸ್ಸಿನಲ್ಲಿ ಹುಟ್ಟುವ ಚಿಂತನಾ ಲಹರಿಯನ್ನು ತಡೆಯಲು ಅಸಾಧ್ಯವಾಗಿ ಚಂಚಲವನ್ನು ಹೊಂದಿರುವ ವ್ಯಕ್ತಿ, ಮನಸ್ಸನ್ನು ಏಕಾಗ್ರಗೊಳಿಸಿ ಶಕ್ತಿ ಕ್ರೌಢೀಕರಣ ಮಾಡಲು ಸನ್ನದ್ಧನಾಗಿರುವ, ಒತ್ತಾಸೆಯನ್ನು ಹೊಂದಿದ ವ್ಯಕ್ತಿ ಯೋಗವನ್ನು ಅಭ್ಯಾಸ ಮಾಡಲು ಅಧಿಕಾರಿ. ವಿಷಯ – ಮನಸ್ಸು ಮತ್ತು ಮನಸ್ಸಿನಲ್ಲಿ ಹುಟ್ಟುವ ವಿವಿಧ ರೀತಿಯ ಅನವಶ್ಯಕ-ಕೆಟ್ಟ ಯೋಚನೆಗಳು, ಮತ್ತು ಬೇಡದ ಯೋಚನೆಗಳನ್ನು ದೂರ ಮಾಡುವ ವಿಧಾನ. ಪ್ರಯೋಜನ – ಬೇಡದ ಯೋಚನೆಗಳು ಕೊನೆಗೊಂಡು, ಪ್ರಶಾಂತ ಸಮಾಧಾನದ ಮನಃಸ್ಥಿತಿ. ಸಂಬಂಧ – ಅಧಿಕಾರಿ, ವಿಷಯ, ಮತ್ತು ಪ್ರಯೋಜನ ಇವುಗಳ ನಡುವೆ ಇರುವ ಪರಸ್ಪರ ಸಂಬಂಧ

ಇಷ್ಟು ಯೋಗಶಾಸ್ತ್ರ ಮತ್ತು ಯೋಗ ದರ್ಶನ ಇವುಗಳ ಮೇಲ್ನೋಟದ ಸಂಬಂಧ. ಪ್ರತಿಯೊಂದು ಶಾಸ್ತ್ರಕ್ಕೆ ದರ್ಶನ ಅತ್ಯಂತ ಅಗತ್ಯ.ಹೇಗೆ ಪತಂಜಲಿ ಯೋಗ ಸೂತ್ರಗಳು ಶಾಸ್ತ್ರ, ದರ್ಶನ ಎರಡೂ ಹೌದೋ, ಹಾಗೆಯೇ ವೇದಾಂತವು ಶಾಸ್ತ್ರ, ದರ್ಶನ ಎರಡೂ ಹೌದು. ವ್ಯಾಕರಣ ಶಾಸ್ತ್ರವೆಂಬುದು ಸ್ಪಷ್ಟವಾದರೂ ಅದರ ದರ್ಶನತ್ವವನ್ನು ನೋಡಿ ತಿಳಿಯಬೇಕು. ಆಯುರ್ವೇದ ಶಾಸ್ತ್ರ ಮತ್ತು ದರ್ಶನ. ಹೀಗೆ ಶಾಸ್ತ್ರ ಮತ್ತು ದರ್ಶನಗಳ ಸಂಬಂಧವನ್ನು ಸ್ಪಷ್ಟವಾಗಿ ಅರಿತಾಗ ಅದರ ಗತಿ, ವೇಗ, ಸ್ಪಷ್ಟತೆ, ನಿಖರತೆ, ಇತ್ಯಾದಿ ಬಹುಮುಖಗಳು ದೃಷ್ಟಿ ಗೋಚರವಾಗುತ್ತವೆ.

(ಈ ಲೇಖನದಲ್ಲಿ ವ್ಯಕ್ತಪಡಿಸಿರುವ ಮಾಹಿತಿ ಮತ್ತು ವಿಷಯಗಳು ಲೇಖಕರ ಸ್ವಂತ ಅನುಭವ ಮತ್ತು ಅಭಿಪ್ರಾಯಗಳಾಗಿವೆ. ಇಲ್ಲಿ ವ್ಯಕ್ತ ಪಡಿಸಿರುವ ಯಾವುದೇ ಮಾಹಿತಿ ಮತ್ತು ವಿಷಯಗಳಿಗೆ ಕನ್ನಡ ಯೋಗವಾಣಿಯಾಗಲಿ ಅಥವಾ IYA ಕರ್ನಾಟಕ ರಾಜ್ಯ ಅಧ್ಯಾಯವಾಗಲಿ ಜವಾಬ್ದಾರಿಯಲ್ಲ.)

Related posts

Antar Mouna (Inner Silence)

admin
2 years ago

Yoga Philosophy and Science; Article Series….

admin
2 years ago

ಅಂತರ್ ಮೌನ (ಆಂತರಿಕ ಮೌನ)

admin
2 years ago
Exit mobile version